ಬೆಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ವಿರುದ್ಧ ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಹೊಸಕೋಟೆ ಠಾಣೆ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್ ರದ್ದುಪಡಿಸುವಂತೆ ಶಾಸಕ ಶರತ್ ಬಚ್ಚೇಗೌಡ ಹಾಗೂ ಬೆಂಬಲಿಗರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಎಸ್.ಸುನಿಲ್ ದತ್ ಯಾದವ್ ಅವರಿದ್ದ ಪೀಠ ವಿಚಾರಣೆ ನಡೆಸಿ ಅರ್ಜಿ ವಜಾ ಮಾಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಕೆಲಕಾಲ ವಾದ ಮಂಡಿಸಿ, ಬಳಿಕ ಪ್ರಕರಣವನ್ನು ಹೊಸಕೋಟೆ ಜೆಎಂಎಫ್ ಕೋರ್ಟ್ನಲ್ಲಿಯೇ ಬಗೆಹರಿಸಿಕೊಳ್ಳುವುದಾಗಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ಪೀಠ ಅರ್ಜಿ ವಜಾ ಮಾಡಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
ಸಂಸದ ಬಿ.ಎನ್.ಬಚ್ಚೇಗೌಡರ ಪುತ್ರ, ಸ್ಥಳೀಯ ಶಾಸಕ ಶರತ್ ಬಚ್ಚೇಗೌಡ ಅವರನ್ನು ಶಿಷ್ಟಾಚಾರಕ್ಕೂ ಸರ್ಕಾರಿ ಕಾಮಗಾರಿಗಳ ಕಾರ್ಯಕ್ರಮಗಳಿಗೆ ಮಂತ್ರಿ ಎಂಟಿಬಿ ನಾಗರಾಜ್ ಕರೆಯುತ್ತಿಲ್ಲವಂತೆ. ಈ ವಿಚಾರವಾಗಿ ಕಾಮಗಾರಿಯೊಂದರ ವೇಳೆ ಗದ್ದಲ ಮಾಡಿದ ಶರತ್ ಬಚ್ಚೇಗೌಡರ ಬೆಂಬಲಿಗರೊಬ್ಬರಿಗೆ ಪೊಲೀಸರು ನಿಂದಿಸಿ, ಹಲ್ಲೆ ಮಾಡಿದ್ದರಂತೆ. ಈ ವಿಚಾರವಾಗಿ ಶರತ್ ಬಚ್ಚೇಗೌಡ ಕಳೆದ ಜನವರಿ 30ರಂದು ತಮ್ಮ 500ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದರು.
ಈ ಸಂಬಂಧ ಎಫ್ಐಆರ್ ದಾಖಲಿಸಿರುವ ಪೊಲೀಸರು, ಶರತ್ ಬಚ್ಚೇಗೌಡ ಹಾಗೂ ಅವರ ಬೆಂಬಲರಿಗರು ಜನವರಿ 30ರಂದು ಹೆದ್ದಾರಿ ತಡೆದು, ವಾಹನಗಳ ಸಂಚಾರಕ್ಕೆ ಅಡ್ಡಿ ಮಾಡಿದರು. ಸೂಟ್ಕೇಸ್ ಮಂತ್ರಿ ಎಂಟಿಬಿ ನಾಗರಾಜ್ಗೆ ಧಿಕ್ಕಾರ, ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಿದರು. ಇದನ್ನು ಪ್ರಶ್ನಿಸಿದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದರು ಎಂದು ಆರೋಪಿಸಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 341, 143, 147, 149, 283ರ ಅಡಿ ಎಫ್ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: ವಿದ್ಯಾಭ್ಯಾಸಕ್ಕೆಂದು ಬಂದು ಸುಲಿಗೆ, ಕಳ್ಳತನ: ಇಬ್ಬರು ವಿದೇಶಿ ವಿದ್ಯಾರ್ಥಿಗಳ ಬಂಧನ