ಬೆಂಗಳೂರು: ಕೋವಿಡ್ ಮೂರನೇ ಅಲೆ ಎದುರಿಸಲು ಕೈಗೊಂಡಿರುವ ಸಿದ್ಧತೆ ಸೇರಿದಂತೆ ರಾಜ್ಯದಲ್ಲಿ ವಿಪತ್ತುಗಳನ್ನು ಎದುರಿಸಲು ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಮುಂದಿನ ಒಂದು ತಿಂಗಳಲ್ಲಿ ಕ್ರಿಯಾ ಯೋಜನೆ ಸಲ್ಲಿಸಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ರಾಜ್ಯದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕೋರಿ ತುಮಕೂರಿನ ಎ. ಮಲ್ಲಿಕಾರ್ಜುನ ಹಾಗೂ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿತು. ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದ ಪೀಠ, ನ್ಯಾಯಾಲಯ ಈ ಹಿಂದೆ ನೀಡಿದ ನಿರ್ದೇಶನದಂತೆ ವಿಪತ್ತು ನಿರ್ವಹಣೆಗೆ ಕ್ರಿಯಾ ಯೋಜನೆ ರೂಪಿಸುವ ಸಂಬಂಧ ಯಾವೆಲ್ಲ ಕ್ರಮ ಕೈಗೊಂಡಿದೆ ಎಂದು ಕೇಳಿತು. ಇದಕ್ಕೆ ಸರ್ಕಾರಿ ವಕೀಲರು ಉತ್ತರಿಸಿ, ವಿಪತ್ತು ನಿರ್ವಹಣಾ ಪ್ರಾಧಿಕಾರ ಎರಡು ಸಭೆಗಳನ್ನು ನಡೆಸಿದೆ. ಆದರೆ, ಕೋವಿಡ್ ವೈರಸ್ ರೂಪಾಂತರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕ್ರಿಯಾ ಯೋಜನೆ ಅಂತಿಮಗೊಳಿಸಲು ಸಾಧ್ಯಗುತ್ತಿಲ್ಲ. ಹೀಗಾಗಿ ಕನಿಷ್ಠ ಮೂರು ವಾರ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಕಾನೂನು ಸೇವಾ ಪ್ರಾಧಿಕಾರದ ಪರ ವಕೀಲರಾದ ಬಿ.ವಿ.ವಿದ್ಯುಲ್ಲತಾ ವಾದಿಸಿ, ಕೊರೊನಾ ಎರಡನೇ ಅಲೆ ನಮಗೆ ಮೂರನೇ ಅಲೆ ತಡೆಗೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳಬೇಕೆಂಬ ಪಾಠ ಕಲಿಸಿದೆ. ಹೀಗಾಗಿ ಸರ್ಕಾರ ಮೂರನೇ ಸಂಭಾವ್ಯ ಅಲೆ ತಡೆಗೆ ಸಿದ್ಧತೆಗಳ ಅಂಶಗಳನ್ನು ಕ್ರಿಯಾ ಯೋಜನೆಯಲ್ಲಿ ಸೇರಿಸಬೇಕು ಎಂದರು.
ಪ್ರತಿಕ್ರಿಯಿಸಿದ ಪೀಠ, ನಿಜ, ಎರಡನೇ ಅಲೆ ಈ ಪರಿ ಅವಾಂತರ ಸೃಷ್ಟಿಸುತ್ತದೆಂದು ಯಾರೂ ಊಹಿಸಿರಲಿಲ್ಲ. ಆದ್ದರಿಂದ ಮೂರನೇ ಅಲೆ ಹಾಗೂ ಅದರ ಸಂಭಾವ್ಯ ರೂಪಾಂತರಗಳ ತಡೆಗೆ ಸಿದ್ಧತೆಗಳನ್ನು ಕೈಗೊಳ್ಳುವುದು ಅತ್ಯಂತ ಮುಖ್ಯವಾದ ವಿಚಾರ. ಹೀಗಾಗಿ, ಸರ್ಕಾರ ಮುಂದಿನ ಒಂದು ತಿಂಗಳಲ್ಲಿ ಸಂಭಾವ್ಯ ಕೋವಿಡ್ 3 ನೇ ಅಲೆ ಸೇರಿದಂತೆ ರಾಜ್ಯದಲ್ಲಿ ವಿಪತ್ತುಗಳನ್ನು ಎದುರಿಸಲು ಹಾಗೂ ನಿರ್ವಹಣೆಗೆ ಕೈಗೊಳ್ಳಲಿರುವ ಕ್ರಮಗಳ ಕುರಿತು ಕ್ರಿಯಾ ಯೋಜನೆ ಸಲ್ಲಿಸಲು ನಿರ್ದೇಶಿಸಿ ವಿಚಾರಣೆ ಮುಂದೂಡಿತು.