ಬೆಂಗಳೂರು : ಪ್ರಾದೇಶಿಕ ಕೇಂದ್ರ ಹಾಗೂ ಯೋಗ ಕೇಂದ್ರ ನಿರ್ಮಾಣಕ್ಕೆ ಬೆಂಗಳೂರು ವಿವಿ ಜ್ಞಾನಭಾರತಿ ಆವರಣದ ಜೈವಿಕ ವನದಲ್ಲಿ ಮಂಜೂರಾಗಿರುವ ಜಾಗದಲ್ಲಿ ಮರಗಳನ್ನು ತೆರವು ಮಾಡದಂತೆ ಹಾಗೂ ನೆಲ ಸಮತಟ್ಟು ಮಾಡದಂತೆ ಕಲಬುರಗಿ ಕೇಂದ್ರೀಯ ವಿವಿ ಕುಲಪತಿ ಹಾಗೂ ಅಂತರ್ ವಿವಿ ಯೋಗ ವಿಜ್ಞಾನ ಕೇಂದ್ರದ ನಿರ್ದೇಶಕರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ಕುರಿತು ವಕೀಲ ಕೆ ಬಿ ವಿಜಯಕುಮಾರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರ ವಕೀಲ ಕೆ ಬಿ ವಿಜಯಕುಮಾರ್ ವಾದಿಸಿ, ಜೈವಿಕ ವನದ ವ್ಯಾಪ್ತಿಯಲ್ಲಿ ಕೇಂದ್ರೀಯ ವಿವಿ ಹಾಗೂ ಅಂತರ್ ವಿವಿ ಯೋಗ ವಿಜ್ಞಾನ ಕೇಂದ್ರಕ್ಕೆ ಮಂಜೂರಾದ 25 ಎಕರೆ ಜಾಗದಲ್ಲಿ ನೆಲ ಸಮತಟ್ಟುಗೊಳಿಸುವ ಮತ್ತು ಮರಗಳನ್ನು ತೆರವುಗೊಳಿಸುವ ಕೆಲಸ ಮುಂದುವರಿದಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಕೊರೊನಾ ಹೆಚ್ಚಳ ಹಿನ್ನೆಲೆ.. ಛತ್ತೀಸ್ಗಢದ ರಾಯಪುರದಲ್ಲಿ 10 ದಿನ ಲಾಕ್ಡೌನ್
ವಾದ ಪರಿಗಣಿಸಿದ ಪೀಠ, ನೆಲ ಸಮತಟ್ಟು ಮತ್ತು ಮರಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರಿಸದಂತೆ ಕಲಬುರಗಿಯ ಕೇಂದ್ರೀಯ ವಿವಿ ಕುಲಪತಿ ಹಾಗೂ ಅಂತರ್ ವಿವಿ ಯೋಗ ವಿಜ್ಞಾನ ಕೇಂದ್ರದ ನಿರ್ದೇಶಕರಿಗೆ ನಿರ್ದೇಶಿಸಿ, ವಿಚಾರಣೆಯನ್ನು ಜೂನ್ 1ಕ್ಕೆ ಮುಂದೂಡಿತು.
ಅರ್ಜಿದಾರರ ಕೋರಿಕೆ : ಬೆಂಗಳೂರು ವಿವಿಗೆ ಸರ್ಕಾರ 1,112 ಎಕರೆ ಜಾಗ ಮಂಜೂರು ಮಾಡಿದೆ. ಇದರಲ್ಲಿ ಪಂತರಪಾಳ್ಯದ ವಿವಿಧ ಸರ್ವೆ ನಂಬರ್‌ಗಳ 127 ಎಕರೆ ಜಾಗದಲ್ಲಿ ಜೈವಿಕವನ ಇದೆ. ಅದರಲ್ಲಿ ನೂರಾರು ವಿವಿಧ ಸಸ್ಯ ಮತ್ತು ಪ್ರಾಣಿ ಪ್ರಬೇಧಗಳು, 500ಕ್ಕೂ ಹೆಚ್ಚು ಔಷಧೀಯ ಸಸ್ಯ ಪ್ರಬೇಧಗಳಿವೆ.
ಈ ಜೈವಿಕ ವನದ ವ್ಯಾಪ್ತಿಯಲ್ಲಿ ಕಲಬುರಗಿಯ ಕೇಂದ್ರೀಯ ವಿವಿಯ ಪ್ರಾದೇಶಿಕ ಕೇಂದ್ರ ಸ್ಥಾಪಿಸಲು 10 ಎಕರೆ ಹಾಗೂ ನ್ಯಾಕ್ ಅಧೀನದಲ್ಲಿ ಬರುವ ಅಂತರ್ ವಿವಿ ಯೋಗ ವಿಜ್ಞಾನ ಕೇಂದ್ರಕ್ಕೆ 15 ಎಕರೆ ಜಾಗ ಬಿಟ್ಟು ಕೊಟ್ಟು 2020ರ ಮಾರ್ಚ್ ಮತ್ತು ಆಗಸ್ಟ್ನಲ್ಲಿ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಈ ಕ್ರಮ ರದ್ದುಪಡಿಸಬೇಕು ಮತ್ತು ಜೈವಿಕ ವನ ಸಂರಕ್ಷಣೆಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.