ಬೆಂಗಳೂರು: ಆರೆಸ್ಸೆಸ್ ನಾಯಕರ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಡಿ ಬಂಧಿತರಾಗಿದ್ದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್ಡಿಪಿಐ) ನಾಲ್ವರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಜಾಮೀನು ಕೋರಿ ಆರೋಪಿಗಳಾದ ಮೊಹಮ್ಮದ್ ಇರ್ಫಾನ್, ಅಕ್ಬರ್ ಪಾಷಾ, ಸೈಯದ್ ಸಿದ್ಧಿಕ್ಕಿ ಮತ್ತು ಸನಾವುಲ್ಲಾ ಶರೀಫ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಜಾನ್ ಮೈಕಲ್ ಕುನ್ಹ ಅವರಿದ್ದ ಪೀಠ ತೀರ್ಪು ಕಾಯ್ದಿರಿಸಿತ್ತು.
ಇಂದು ಆದೇಶ ಪ್ರಕಟಿಸಿರುವ ಪೀಠ, ಆರೋಪಿಗಳು ತಲಾ ಒಂದು ಲಕ್ಷ ರೂ. ಮೊತ್ತದ ಬಾಂಡ್, ಅಷ್ಟೇ ಮೊತ್ತಕ್ಕೆ ಇಬ್ಬರು ವ್ಯಕ್ತಿಗಳ ಶ್ಯೂರಿಟಿ, ಅನುಮತಿ ಇಲ್ಲದೆ ನ್ಯಾಯಾಲಯದ ವ್ಯಾಪ್ತಿಯಿಂದ ಹೊರ ಹೋಗಬಾರದು, ವಿಚಾರಣಾ ನ್ಯಾಯಾಲಯಕ್ಕೆ ತಪ್ಪದೆ ಹಾಜರಾಗಬೇಕು ಎಂಬ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಆರೋಪಿಗಳು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬುದಕ್ಕೆ ತನಿಖಾಧಿಕಾರಿಗಳು ಯಾವುದೇ ಪುರಾವೆ ಒದಗಿಸಿಲ್ಲ. ಹಾಗೆಯೇ, ಬಂಧಿತರ ನ್ಯಾಯಾಂಗ ಬಂಧನ ಅವಧಿ ಮುಂದುವರಿಸಬೇಕೆಂಬ ವಾದಕ್ಕೆ ಸಮರ್ಥ ಕಾರಣವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: 2019ರ ಡಿಸೆಂಬರ್ 22ರಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ನಗರದ ಟೌನ್ಹಾಲ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ ಸಮಾವೇಶ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಹಲವು ಆರೆಸ್ಸೆಸ್ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. ಸಮಾವೇಶ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ಆರೆಸ್ಸೆಸ್ ಕಾರ್ಯಕರ್ತ ವರುಣ್ ಎಂಬಾತನನ್ನು ಆರು ಮಂದಿ ಅಡ್ಡಗಟ್ಟಿ ಥಳಿಸಿದ್ದರು. ದಾಳಿಯಲ್ಲಿ ವರುಣ್ ತೀವ್ರವಾಗಿ ಗಾಯಗೊಂಡಿದ್ದರು.
ಈ ಸಂಬಂಧ ಕಲಾಸಿಪಾಳ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೊಹಮ್ಮದ್ ಇರ್ಫಾನ್ ಮತ್ತಿತರೆ ಆರು ಮಂದಿ ಎಸ್ಡಿಪಿಐ ಸದಸ್ಯರನ್ನು ಬಂಧಿಸಿದ್ದರು. ಬಳಿಕ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ಬಂಧಿತರು ಸಮಾವೇಶದಲ್ಲಿ ಭಾಗಿಯಾಗಿದ್ದ ಆರೆಸ್ಸೆಸ್ನ ಪ್ರಮುಖ ನಾಯಕರನ್ನು ಕೊಲ್ಲುಲು ಸಂಚು ರೂಪಿಸಿದ್ದರು ಎಂದು ಆರೋಪಿಸಿದ್ದರು.