ಬೆಂಗಳೂರು: ನಗರದ ಪಾದಚಾರಿ ಮಾರ್ಗಗಳ ಮೇಲೆ ವಾಹನ ನಿಲುಗಡೆ ಮಾಡಿದ ಪ್ರಕರಣಗಳಲ್ಲಿ ಈವರೆಗೆ ಎಷ್ಟು ಜನರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗಿದೆ ಎಂಬ ಕುರಿತು ವರದಿ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸಿದೆ. ಜನರ ಓಡಾಟಕ್ಕೆ ತೊಂದರೆಯಾಗುವಂತೆ ಫುಟ್ಪಾತ್ ಮೇಲೆ ಅಕ್ರಮವಾಗಿ ವಾಹನ ನಿಲುಗಡೆ ಮಾಡದಂತೆ ನಗರದ ವಕೀಲ ರಾಮಚಂದ್ರ ರೆಡ್ಡಿ ಹಾಗೂ ಲೆಟ್ಜ್ ಕಿಟ್ ಫೌಂಡೇಷನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಪಾಲಿಕೆ ಪರ ವಕೀಲರಾದ ಕೆ.ಎನ್ ಪುಟ್ಟೇಗೌಡ ವಾದ ಮಂಡಿಸಿ, ಪಾದಚಾರಿ ಮಾರ್ಗಗಳ ಮೇಲೆ ವಾಹನ ನಿಲುಗಡೆ ಮಾಡದಂತೆ ಹೈಕೋರ್ಟ್ ಆದೇಶದಂತೆ ಬಿಬಿಎಂಪಿ ಸುತ್ತೋಲೆ ಹೊರಡಿಸಿದೆ ಎಂದರು.
ಇದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲ ಪುತ್ತಿಗೆ ರಮೇಶ್ ವಾದಿಸಿ ಪಾಲಿಕೆಯಿಂದ ಹೈಕೋರ್ಟ್ ಆದೇಶ ಪಾಲನೆಯಾಗುತ್ತಿಲ್ಲ. ಈಗಲೂ ಫುಟ್ಪಾತ್ಗಳ ಮೇಲೆ ವಾಹನ ನಿಲ್ಲಿಸಲಾಗುತ್ತಿದೆ. ಜಯನಗರ ಪೊಲೀಸ್ ಠಾಣೆ ಸಮೀಪ ಪಾದಚಾರಿ ಮಾರ್ಗಗಳಲ್ಲಿ ಜಪ್ತಿ ಮಾಡಿದ ವಾಹನಗಳನ್ನು ನಿಲ್ಲಿಸಲಾಗಿದೆ. ಈ ಮೂಲಕ ಪೊಲೀಸರೇ ಆದೇಶ ಉಲ್ಲಂಘಿಸಿದ್ದಾರೆ ಎಂದು ತಿಳಿಸಿ, ಆ ಕುರಿತ ಪೋಟೋಗಳನ್ನೂ ಸಲ್ಲಿಸಿದರು.
ಸಾರ್ವಜನಿಕರ ಸಹಕಾರವೂ ಅಗತ್ಯ
ಪಾಲಿಕೆ ವಕೀಲರು, ಈ ವಿಚಾರದಲ್ಲಿ ಸಾರ್ವಜನಿಕರ ಸಹಕಾರವೂ ಅಗತ್ಯ, ಅವರು ಕೂಡ ಫುಟ್ಪಾತ್ನಲ್ಲಿ ವಾಹನ ನಿಲ್ಲಿಸದೇ ಜವಾಬ್ದಾರಿ ಪ್ರದರ್ಶಿಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಜನರ ಸಹಕಾರ ಬೇಕು ನಿಜ. ಆದರೆ, ವಾಹನ ನಿಲುಗಡೆ ಮಾಡುವವರ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸುವಂತೆ ಪಾಲಿಕೆಗೆ ಹೈಕೋರ್ಟ್ 2021ರ ಏ.24ರಂದು ನಿರ್ದೇಶಿಸಿದೆ. ಆ ಪ್ರಕಾರ ಕ್ರಮ ಕೈಗೊಂಡಿಲ್ಲವೇಕೆ ಎಂದು ಪ್ರಶ್ನಿಸಿತು. ಅರ್ಜಿದಾರರ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಕೋರ್ಟ್ ಆದೇಶದ ಮೊದಲಿದ್ದ ಪರಿಸ್ಥಿತಿಯೇ ಈಗಲೂ ಇದೆ ಎಂದು ವಿವರಿಸಿದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಪೀಠ, ಅರ್ಜಿದಾರರು ಪೋಟೋಗಳಲ್ಲಿ ತಿಳಿಸಿರುವ ಸ್ಥಳಗಳಿಗೆ ಪಾಲಿಕೆ ಹಾಗೂ ಇತರ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ವಸ್ತುಸ್ಥಿತಿ ವರದಿ ಸಿದ್ದಪಡಿಸಬೇಕು. ಆ ವರದಿ ಆಧರಿಸಿ ಸಂಚಾರಿ ಠಾಣೆ ಪೊಲೀಸರು ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಹಾಗೆಯೇ, ಫುಟ್ಪಾತ್ಗಳಲ್ಲಿ ವಾಹನ ನಿಲುಗಡೆ ಮಾಡಿದ ಪ್ರಕರಣಗಳಲ್ಲಿ ಈವರೆಗೆ ಎಷ್ಟು ಜನರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗಿದೆ ಎಂಬ ಕುರಿತು ಪಾಲಿಕೆ ಹಾಗೂ ಸರ್ಕಾರ ಮಾಹಿತಿ ನೀಡಬೇಕು ಎಂದು ನಿರ್ದೇಶಿಸಿ, ವಿಚಾರಣೆ ಆ.24ಕ್ಕೆ ಮುಂದೂಡಿತು.