ಬೆಂಗಳೂರು : 2020ರ ಡಿಸೆಂಬರ್ ತಿಂಗಳಲ್ಲಿ ನಡೆದ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ದಾಖಲಿಸಲಾದ ಎಫ್ಐಆರ್ ಮೇಲಿನ ತನಿಖಾ ವರದಿಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ನೌಕರರ ಮುಷ್ಕರವನ್ನು ಆಕ್ಷೇಪಿಸಿ ಸಮರ್ಪಣಾ ಸಂಸ್ಥೆ ಸಲ್ಲಿಸಿರುವ ಪಿಐಎಲ್ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರಿ ವಕೀಲರು, ಮುಷ್ಕರಕ್ಕೆ ಕರೆ ನೀಡಿದ್ದವರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 9 ಎಫ್‌ಐಆರ್ ಗಳಿಗೆ ಸಂಬಂಧಿಸಿದ ತನಿಖಾ ವರದಿಯನ್ನು ಸಲ್ಲಿಸಿ, ಪ್ರಕರಣಕ್ಕೆ ಸಂಬಂಧಿಸಿದ ಸಿಸಿ ಟಿವಿ ದೃಶ್ಯಾವಳಿಗಳು ಇಲ್ಲವೆಂದು ಮಾಹಿತಿ ನೀಡಿದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪೀಠ ಸಿಸಿಟಿವಿ ದೃಶ್ಯಾವಳಿ ಇಲ್ಲವೆಂದರೆ ಹೇಗೆ?, ದೃಶ್ಯಾವಳಿಗಳನ್ನು ಸಂಗ್ರಹಿಸಲು ಪ್ರಯತ್ನಿಸಿದ್ದೀರಾ? ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು. ಅಲ್ಲದೆ, ಹಿಂದಿನ ವಿಚಾರಣೆ ವೇಳೆ ಮುಷ್ಕರಕ್ಕೆ ಸಂಬಂಧಿಸಿದಂತೆ ದಾಖಲಿಸಿರುವ ಎಲ್ಲಾ 9 ಪ್ರಕರಣಗಳ ತನಿಖಾ ವರದಿಯನ್ನು ಸಿಸಿಟಿವಿ ದೃಶ್ಯಗಳ ಸಹಿತ ಸಲ್ಲಿಸುವಂತೆ ನ್ಯಾಯಾಲಯ ನಿರ್ದೇಶಿಸಿತ್ತು.
ಆದರೆ ಸರ್ಕಾರ ಆದೇಶದಂತೆ ವರದಿ ಸಲ್ಲಿಸಿಲ್ಲ. ಹೀಗಾಗಿ, ಮೆಮೊ ತಿರಸ್ಕರಿಸಲಾಗುತ್ತಿದೆ ಎಂದು ತಿಳಿಸಿತು. ಅಲ್ಲದೇ, ಮುಂದಿನ ವಿಚಾರಣೆ ವೇಳೆ ಆಗಸ್ಟ್ 31ರವರೆಗಿನ ತನಿಖಾ ವರದಿ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.
ಅರ್ಜಿದಾರ ಪರ ವಕೀಲ ಜಿ.ಆರ್. ಮೋಹನ್ ಮಧ್ಯಂತರ ಅರ್ಜಿ ಸಲ್ಲಿಸಿ, ಮುಷ್ಕರ ನಡೆಸಿದ ಕೋಡಿಹಳ್ಳಿ ಚಂದ್ರಶೇಖರ್ ಗೌರವ ಅಧ್ಯಕ್ಷರಾಗಿರುವ ಸಾರಿಗೆ ನೌಕರರ ಕೂಟವನ್ನು ಪ್ರತಿವಾದಿ ಮಾಡುವಂತೆ ಕೋರಿದರು. ಅರ್ಜಿ ಪರಿಗಣಿಸಿದ ಪೀಠ, ಸಾರಿಗೆ ನೌಕರರ ಕೂಟವನ್ನು ಪ್ರತಿವಾದಿ ಮಾಡಿ ನೋಟಿಸ್ ಜಾರಿಗೊಳಿಸಿತು.
ಅರ್ಜಿದಾರರ ಕೋರಿಕೆ
ಕೆಎಸ್‌ಆರ್‌ಟಿಸಿ ಮತ್ತು ಬಿಬಿಎಂಟಿಸಿ ನೌಕರರ ಸಂಘಗಳು 2020ರ ಡಿಸೆಂಬರ್ನಲ್ಲಿ ಮುಷ್ಕರ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿರುವ ಸಂಸ್ಥೆ ಮುಷ್ಕರದಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ. ಅಲ್ಲದೇ ಮುಷ್ಕರದಿಂದ ಸಾರಿಗೆ ಸಂಸ್ಥೆಗಳಿಗೆ 7.93 ಕೋಟಿ ನಷ್ಟವಾಗಿದೆ. ಆದ್ದರಿಂದ, ನಷ್ಟ ಮೊತ್ತವನ್ನು ಮಷ್ಕರ ನಡೆಸಿದ ನೌಕರರಿಂದ ವಸೂಲಿ ಮಾಡಬೇಕು. ಮುಷ್ಕರಕ್ಕೆ ಕರೆ ನೀಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.
ಇದನ್ನೂ ಓದಿ: ಚಿಂದಿ ಆಯುವ ಮಹಿಳೆಯ ಇಂಗ್ಲಿಷ್ ಕೌಶಲ್ಯ: ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಸೃಷ್ಟಿಸಿದ ವಿಡಿಯೋ