ಬೆಂಗಳೂರು : ಜಾತಿ ಆಧಾರಿತ ನಿಗಮ ಮಂಡಳಿಗಳ ರಚನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ವಿಚಾರಣೆಗೆ ಅಂಗೀಕರಿಸಿರುವ ಹೈಕೋರ್ಟ್, ಜಾತಿ ಆಧಾರಿತ ನಿಗಮ ಮಂಡಳಿಗಳ ರಚನೆಯ ಕಾನೂನಾತ್ಮಕ ಅಂಶಗಳನ್ನು ಪರಿಶೀಲಿಸುವುದಾಗಿ ತಿಳಿಸಿದೆ.
ಈ ಕುರಿತು ವಕೀಲ ಎಸ್. ಬಸವರಾಜು ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಸರ್ಕಾರ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನಿಯಮಾನುಸಾರವೇ ಜಾತಿ ಆಧಾರಿತ ನಿಗಮ ಮಂಡಳಿಗಳನ್ನು ರಚಿಸಿದೆ. ಅರ್ಜಿದಾರರು ಎಲ್ಲ ಜಾತಿ ಆಧಾರಿತ ಮಂಡಳಿಗಳನ್ನು ಪ್ರಶ್ನಿಸಿಲ್ಲ. ಬದಲಿಗೆ ಕೆಲವೇ ಮಂಡಳಿಗಳನ್ನು ಪ್ರಶ್ನಿಸಿದ್ದಾರೆ. ಇವುಗಳಲ್ಲಿ ಕೆಲ ಮಂಡಳಿಗಳು ರಚನೆಯಾಗಿ 10 ವರ್ಷಕ್ಕೂ ಹೆಚ್ಚು ಸಮಯವೇ ಕಳೆದಿದೆ. ಅವುಗಳನ್ನು ಸಾಕಷ್ಟು ವಿಳಂಬದ ನಂತರ ಪ್ರಶ್ನಿಸಿರುವ ಕ್ರಮ ಸರಿಯಲ್ಲ. ಜಾತಿ ಆಧಾರಿತ ನಿಮಗ ಮಂಡಳಿಗಳ ರಚನೆ ಸಂವಿಧಾನಬದ್ದವಾಗಿಯೇ ಇದೆ ಎಂದು ವಿವರಿಸಿದರು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್, ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿ ಅವರ ನೇತೃತ್ವದ ಆಯೋಗ ರಾಜ್ಯದಲ್ಲಿ ಹಿಂದುಳಿದ ಜಾತಿಗಳ ಸಮೀಕ್ಷೆ ನಡೆಸಿತ್ತು. ಈ ವೇಳೆ ರಾಜ್ಯದಲ್ಲಿ 500ಕ್ಕೂ ಹೆಚ್ಚು ಹಿಂದುಳಿದ ಸಮುದಾಯಗಳನ್ನು ಪಟ್ಟಿ ಮಾಡಲಾಗಿತ್ತು. ಇದರಲ್ಲಿ ಎಸ್ಸಿ ಸಮುದಾಯದಲ್ಲಿ 101 ಜಾತಿಗಳು ಹಾಗೂ ಎಸ್ಟಿ ಸಮುದಾಯದಲ್ಲಿ 50 ಜಾತಿಗಳು ಸೇರಿವೆ. ಇಷ್ಟೆಲ್ಲಾ ಹಿಂದುಳಿತ ಜಾತಿಗಳನ್ನು ಬಿಟ್ಟು ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ವೀರಶೈವ ಲಿಂಗಾಯತ ಅಭಿವೃದ್ಧಿ ಮಂಡಳಿ, ಮರಾಠ ಅಭಿವೃದ್ಧಿ ಮಂಡಳಿಗಳನ್ನು ಸ್ಥಾಪಿಸಿದೆ. ಆದರೆ, ಈ ಜಾತಿಗಳು ಹಿಂದುಳಿದ ವರ್ಗಕ್ಕೆ ಸೇರಿದ ಜಾತಿಗಳಲ್ಲ ಎಂದು ತಿಳಿಸಿ ಸಮುದಾಯಗಳ ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಸ್ಥಾನಮಾನಗಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಉಲ್ಲೇಖಿಸಿ ವಿವರಣೆ ನೀಡಿದರು.
ಅಲ್ಲದೇ, ನಿಜವಾದ ಹಿಂದುಳಿದ ಜಾತಿಗಳನ್ನು ಬಿಟ್ಟು ಬಲಿಷ್ಠ ಸಮುದಾಯಗಳಿಗೆ ಜಾತಿ ಆಧಾರಿತ ನಿಮಗ-ಮಂಡಳಿಗಳನ್ನು ರಚಿಸಿರುವುದು ಜಾತಿಗಳ ನಡುವಿನ ಮತ್ತಷ್ಟು ಅಸಮಾನತೆಗೆ ಕಾರಣವಾಗಲಿದೆ. ಅಲ್ಲದೇ, ಸಂವಿಧಾನದ ವಿಧಿ 14ಕ್ಕೆ ವಿರುದ್ಧವಾದದು ಎಂದು ವಿವರಿಸಿದರು.
ವಾದ ಪ್ರತಿವಾದ ಆಲಿಸಿದ ಪೀಠ, ಜಾತಿ ಆಧಾರಿತ ನಿಗಮ-ಮಂಡಳಿಗಳನ್ನು ರಚಿಸಿರುವ ಸರ್ಕಾರದ ಕ್ರಮವನ್ನು ಕಾನೂನಾತ್ಮಕ ಅಂಶಗಳ ಅಡಿ ಪರಿಶೀಲಿಸುವುದಾಗಿ ತಿಳಿಸಿತು. ಅಲ್ಲದೇ, ಸರ್ಕಾರ ನಿರ್ದಿಷ್ಟ ಸಮುದಾಯದ ಅಭಿವೃದ್ಧಿಗೆ ತೆರಿಗೆ ಹಣ ವೆಚ್ಚ ಮಾಡುವುದು ಸಂವಿಧಾನದ ಜಾತ್ಯಾತೀತ ಪರಿಕಲ್ಪನೆಗೆ ವಿರುದ್ಧವೇ? ಜಾತಿ ಆಧಾರಿತ ನಿಗಮಗನ್ನು ರಚಿಸಲು ಸರ್ಕಾರಕ್ಕೆ ಕಾನೂನಿನಲ್ಲಿ ಅವಕಾಶವಿದೆಯೆ? ಎಂಬ ಕುರಿತು ಪರಿಶೀಲಿಸಲಿದೆ ಎಂದಿತು. ಅಲ್ಲದೇ, ಅರ್ಜಿಗೆ ಸರ್ಕಾರ ಎತ್ತಿದ್ದ ಪ್ರಾಥಮಿಕ ಆಕ್ಷೇಪಣೆಗಳನ್ನು ವಜಾಗೊಳಿಸಿರುವುದಾಗಿ ತಿಳಿಸಿದ ಪೀಠ, ವಿಚಾರಣೆಯನ್ನು 2022ರ ಫೆಬ್ರವರಿ 2ಕ್ಕೆ ಮುಂದೂಡಿತು.