ಬೆಂಗಳೂರು: ಈಗಾಗಲೇ ರಾಜ್ಯಕ್ಕೆ ಮುಂಗಾರು ಆಗಮನವಾಗಿದೆ. ಆರಂಭದಲ್ಲೇ ವರುಣ ಆರ್ಭಟಿಸುವ ಮುನ್ಸೂಚನೆ ಸಿಕ್ಕಿದೆ. ನೈರುತ್ಯ ಮಾನ್ಸೂನ್ ಸದ್ಯ ದುರ್ಬಲವಾಗಿದ್ದರೂ, ಮುಂದಿನ ವಾರ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ ಅಂದ್ರೆ, ಜೂನ್ 13, ಹಾಗೂ 14 ರಂದು ಆರೆಂಜ್ ಹಾಗೂ ರೆಡ್ ಅಲರ್ಟ್ ನೀಡಲಾಗಿದೆ.
ಜೂನ್ 14 ಸೋಮವಾರದಂದು 20 ಸೆಂ.ಮೀ ಗೂ ಅಧಿಕ ಮಳೆಯಾಗುವ ನಿರೀಕ್ಷೆಯಿದ್ದು, ಈಗಾಗಲೇ ಹವಾಮಾನ ಇಲಾಖೆ ರೆಡ್ ಅಲರ್ಟ‌್ ನೀಡಿದೆ. ಗುಡುಗು, ಮಿಂಚು, ಹಾಗೂ ಭಾರಿ ಗಾಳಿಯೊಂದಿಗೆ ಮಳೆ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಸದ್ಯ ಕರಾವಳಿ ಜಿಲ್ಲೆಗಳಲ್ಲಿ ಜೂನ್ 10, 11, 12 ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಭಾನುವಾರದಿಂದ ಮಳೆಗಾಲ ಮಳೆ ತೀವ್ರಗೊಳ್ಳಲಿದೆ. ಆದರೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.
ಯೆಲ್ಲೋ ಅಲರ್ಟ್
ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಿಗೆ ಜೂನ್ 13 ಹಾಗೂ 14 ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ. ಬಳ್ಳಾರಿ ಹಾಗೂ ಚಿತ್ರದುರ್ಗಕ್ಕೂ ಜೂನ್ 13, 14 ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ.
ಆರೆಂಜ್ ಅಲರ್ಟ್
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಜೂನ್ 13, 14 ರಂದು ಆರೆಂಜ್ ಅಲರ್ಟ್ ನೀಡಲಾಗಿದೆ. ಕೆಲವು ಕಡೆ ಜೂನ್ 9 ರಿಂದ 13 ರವರೆಗೆ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.