ಬೆಂಗಳೂರು: ನೈರುತ್ಯ ಮಾನ್ಸೂನ್ ಗುರುವಾರ ರಾಜ್ಯದಲ್ಲಿ ದುರ್ಬಲವಾಗಿದ್ದು, ಕರಾವಳಿ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ವ್ಯಾಪಕ ಮಳೆಯಾಗಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಕೆಲವು ಭಾಗಗಳಲ್ಲಿ ಮಾತ್ರ ಮಳೆಯಾಗಿದೆ.
ಹಾಸನದ ಸಕಲೇಶಪುರದಲ್ಲಿ 6 ಸೆಂ.ಮೀ., ಉಡುಪಿಯ ಕೊಲ್ಲೂರಿನಲ್ಲಿ 5 ಸೆಂಮೀ., ಉತ್ತರ ಕನ್ನಡದ ಕದ್ರಾದಲ್ಲಿ 4 ಸೆಂ.ಮೀ., ಕಾರ್ಕಳ, ಚಿಕ್ಕಮಗಳೂರಿನ ಕೊಟ್ಟಿಗೇಹಾರ, ಶಿವಮೊಗ್ಗದ ಹುಂಚದಕಟ್ಟೆಯಲ್ಲಿ ತಲಾ 3 ಸೆಂ.ಮೀ., ಧರ್ಮಸ್ಥಳ, ಬೆಳ್ತಂಗಡಿ, ಆಗುಂಬೆ, ಶೃಂಗೇರಿಯಲ್ಲಿ ತಲಾ 2 ಸೆಂ.ಮೀ., ಸುಳ್ಯ, ಉತ್ತರ ಕನ್ನಡದ ಯಲ್ಲಾಪುರ, ಮಂಚಿಕೇರಿ, ಉಡುಪಿಯ ಕೋಟ, ಶಿರಾಲಿ, ಬೆಳಗಾವಿಯ ಖಾನಾಪುರ, ಲೋಂಡ, ಭಾಗಮಂಡಲ, ಸೋಮವಾರಪೇಟೆ, ಚಿಕ್ಕಮಗಳೂರಿನ ಕೊಪ್ಪ, ಜಯಪುರ, ಶಿವಮೊಗ್ಗದ ಅನವಟ್ಟಿಯಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಕಡಿಮೆ ಒತ್ತಡವಿರುವ ವಿಸ್ತರಿಸಿದ ಪ್ರದೇಶವಿದ್ದು, ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 2ರವರೆಗೆ ವ್ಯಾಪಕ ಮಳೆ ನಿರೀಕ್ಷಿಸಲಾಗಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮಾತ್ರ ಮಳೆಯಾಗುವ ಹೆಚ್ಚಿನ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವೊಮ್ಮೆ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ಗರಿಷ್ಠ ತಾಪಮಾನ 28.3 ಹಾಗೂ ಕನಿಷ್ಠ ತಾಪಮಾನ 19.8 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ: ಕೋವಿಡ್ ನಿರ್ವಹಣೆಗೆ ಬಹುಪಾಲು SDRF ನಿಧಿ ಬಳಕೆ ; ನೆರೆ ಪರಿಹಾರಕ್ಕೆ ಉಳಿದಿರುವುದು ಅಲ್ಪ ಹಣ!