ಬೆಂಗಳೂರು: ಅಸನಿ ಚಂಡಮಾರುತ ಎಫೆಕ್ಸ್ನಿಂದಾಗಿ ನಗರದೆಲ್ಲೆಡೆ ಭಾರಿ ಮಳೆಯಿಂದಾಗಿ ರಾಜಧಾನಿ ಜನರು ಪರಿತಪಿಸುವಂತಾಯಿತು. ಧಾರಾಕಾರ ಮಳೆಯಿಂದಾಗಿ ನಗರದ ಹಲವೆಡೆ ಜನರು ತೊಂದರೆಗೆ ಒಳಗಾದರು. ಸುಗಮ ವಾಹನ ಸಂಚಾರದಲ್ಲಿ ಅಡೆತಡೆ ಉಂಟಾಯಿತು.
ಹಳೆ ಮದ್ರಾಸ್ ರೋಡ್, ಹೊಸೂರು ರಸ್ತೆ ಹಾಗೂ ಮೈಸೂರು ರಸ್ತೆ ಸೇರಿದಂತೆ ನಗರದ ಬಹುತೇಕ ಭಾಗಗಳಲ್ಲಿ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಯಿತು. ನಗರದ ಕೆಲವು ರಸ್ತೆಗಳಲ್ಲಿ ಮಂಡಿತನಕವೂ ನೀರು ತುಂಬಿದ್ದರಿಂದ ಮಂದಗತಿಯಲ್ಲೇ ವಾಹನ ಸಂಚಾರ ನಡೆಸಿದ್ದರಿಂದ ಸವಾರರು ಪರಿತಪಿಸಿದರು. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದರಿಂದ ಹೈರಾಣಾಗುವಂತೆ ಮಾಡಿತು.
ಬಡಾವಣೆಗೆ ನುಗ್ಗಿದ ನೀರು ರಸ್ತೆಗೆ ಹರಿದ ಚರಂಡಿ ನೀರು: ಶಾಂತಿನಗರ, ತ್ಯಾಗರಾಜನಗರ, ಪದ್ಮನಾಭನಗರ , ಹೊಸಕೆರೆಹಳ್ಳಿಯ ದತ್ತಾತ್ರೇಯ ಟೆಂಪಲ್ ರಸ್ತೆಯಲ್ಲಿ ಮೊಣಕಾಲಿನವರೆಗೂ ನೀರು ತುಂಬಿಕೊಂಡಿತು. ರಸ್ತೆ ಬದಿಯಲ್ಲಿರುವ ಚರಂಡಿಗಳಲ್ಲಿ ನೀರು ತುಂಬಿ ರಸ್ತೆಗೆ ಹರಿದ ಪರಿಣಾಮ ಕೆಲ ಮನೆಗಳಿಗೆ ನೀರು ನುಗ್ಗಿದೆ. ಆತಂಕದಿಂದಲೇ ಮನೆಯಿಂದ ನೀರು ಹೊರ ಚೆಲ್ಲುವ ದೃಶ್ಯಗಳು ಅಲ್ಲಲ್ಲಿ ಕಂಡುಬಂದಿತು.
ನದಿಯಂತಾದ ರಸ್ತೆಗಳು: ಕೋರಮಂಗಲ, ಈಜಿಪುರ, ದೊಮ್ಮಲೂರು, ಎಚ್ ಎಎಲ್ ಸೇರಿದಂತೆ ಸುತ್ತಮುತ್ತಲಿನ ರಸ್ತೆಗಳಲ್ಲಿ ಜಲಾವೃತವಾದವು. ಕಿರಿದಾದ ರಸ್ತೆಗಳಂತೂ ನದಿ ನೀರಿನಂತೆ ರಸ್ತೆಯಲ್ಲಿ ರಭಸವಾಗಿ ನೀರು ಹರಿದ ಪರಿಣಾಮ ವಾಹನಗಳಂತೂ ನಿಂತ ಜಾಗದಲ್ಲಿ ನಿಲ್ಲುವಂತಾಯಿತು. ಅಲ್ಲದೆ ಪಾರ್ಕ್ ಮಾಡಲಾಗಿದ್ದ ಬೈಕ್ ಹಾಗೂ ಕಾರುಗಳು ಪ್ರಾಯಶಃ ಮುಳುಗಿದ ಸ್ಥಿತಿಯಂತೆ ಇತ್ತು.
ಹಾಗೆಯೇ ಓಕಳೀಪುರಂ ಜಂಕ್ಷನ್ನಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಅರ್ಧ ಗಂಟೆ ನಿಂತಲ್ಲೇ ನಿಲ್ಲುವಂತಾಗಿತ್ತು. ಇದರಿಂದ ಕಿಲೋಮೀಟರ್ನಷ್ಟು ದೂರದವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಸವೇಶ್ವರನಗರ ಅಭಿಮಾನಿ ಕಲ್ಯಾಣ ಮಂಟಪದ ರಸ್ತೆಯಲ್ಲೂ ನೀರು ತುಂಬಿ ಕಾರು, ಬೈಕ್ಗಳು ಮುಳುಗಡೆಯಾಗಿದ್ದವು. ಸುಲ್ತಾನ್ ಪೇಟೆ, ಚಿಕ್ಕಪೇಟೆ ಮೆಟ್ರೋ ಸೇಷನ್ ಬಳಿ ಅಂಗಡಿ ಮುಂಗಟ್ಟು ಎತ್ತರಕ್ಕೆ ಮಳೆ ನೀರು ತುಂಬಿತ್ತು.
ನಮ್ಮ ಮೆಟ್ರೋ ಸಂಚಾರ ಸ್ಥಗಿತ: ಮಳೆಯಿಂದ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅಡ್ಡಿಯುಂಟಾಯಿತು. ಸುಮಾರು 15 ನಿಮಿಷ ರೈಲು ಸೇವೆ ಬಂದ್ ಆಗಿತ್ತು. ಪ್ರಯಾಣಿಕರು ಕೆಲಕಾಲ ಆತಂಕಕ್ಕೆ ಒಳಗಾಗುವಂತಾಯಿತು. ಕೂಡಲೇ ಅಧಿಕಾರಿಗಳು ರೈಲು ಸಂಚಾರಕ್ಕೆ ಅಡ್ಡಿಯಾಗಿದ್ದ ಸಮಸ್ಯೆ ಬಗೆಹರಿಸಿದರು.
ಇದನ್ನು ಓದಿ:ಮಳೆಗಾಲದಲ್ಲಾಗುವ ಸಮಸ್ಯೆಗೆ ತ್ವರಿತ ಸ್ಪಂದನೆ.. ಇನ್ಮುಂದೆ ಸಿಬ್ಬಂದಿ ನೀಡಬೇಕು ಮೊಬೈಲ್ ನಂಬರ್