ಬೆಂಗಳೂರು : ಜನವರಿ 3 ರಿಂದಲೇ 15 ರಿಂದ 18 ವಯಸ್ಸಿನೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲು ಕೇಂದ್ರ ಸರ್ಕಾರ ಅನುಮತಿಸಿದೆ. ನಿನ್ನೆಯಷ್ಟೇ ಈ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅದರಂತೆ ಲಸಿಕೆ ನೀಡಲು ಸಿದ್ಧತೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ 15-19 ವರ್ಷದ 43 ಲಕ್ಷ ಮಕ್ಕಳಿದ್ದಾರೆ. ಎಲ್ಲರಿಗೂ ಲಸಿಕೆ ನೀಡಬೇಕಾಗಿದೆ. ಅಗತ್ಯದಷ್ಟು ಲಸಿಕೆ ದಾಸ್ತಾನು ಇಲ್ಲದ ಕಾರಣ ಲಸಿಕೆ ಸರಬರಾಜಿಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಆರೋಗ್ಯ ಇಲಾಖೆ ಲಸಿಕೆ ನೀಡಲು ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. 15- 18 ವಯಸ್ಸಿನ ಮಕ್ಕಳಿಗೆ ಜನವರಿ 3ರಿಂದಲೇ ಲಸಿಕೆ ನೀಡಲು ಚಾಲನೆ ನೀಡುತ್ತೇವೆ ಎಂದು ಹೇಳಿದರು.
ಒಮಿಕ್ರಾನ್ ಹರಡದಿರಲು ನೈಟ್ ಕರ್ಫ್ಯೂ
ಒಮಿಕ್ರಾನ್ ಹರಡುವಿಕೆ ನಿಯಂತ್ರಿಸುವ ಸಲುವಾಗಿ ಇಂದಿನಿಂದ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ಸಂಬಂಧ ಮಾತನಾಡಿದ ಸಚಿವರು, 10 ದಿನಗಳಿಗೆ ಸದ್ಯ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಜನರು ಇದಕ್ಕೆ ಸಹಕಾರ ಕೊಡಬೇಕು ಎಂದು ಕೋರಿದರು.
10 ದಿನದಲ್ಲಿ ಕೊರೊನಾ ಹೊಸ ಪ್ರಬೇಧ ಯಾವ ರೀತಿ ವರ್ತನೆ ಮಾಡಲಿದೆ ಎಂಬುದನ್ನ ತಿಳಿಯಲಾಗುವುದು. ಕರ್ಫ್ಯೂಗೆ ವಿರೋಧ ವ್ಯಕ್ತವಾಗ್ತಿದೆ. ಆದರೆ, ಮೊದಲ ಹಾಗೂ ಎರಡನೇ ಅಲೆಯಲ್ಲಿ ಯಾಕೆ ಲಾಕ್‌ಡೌನ್ ಮಾಡಲಾಗಿತ್ತು ಅನ್ನೋದನ್ನ ಜನರು ವಿಚಾರ ಮಾಡಬೇಕು. ತಾಂತ್ರಿಕ ಸಲಹಾ ಸಮಿತಿ ಜೊತೆಗೆ ಸಭೆ ಮಾಡಿಯೇ ನಿರ್ಣಯಿಸಲಾಗಿದೆ. ಸರ್ಕಾರ ಸುಮ್ಮನೇ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದರು.
ಸಿದ್ದರಾಮಯ್ಯ ಮಾತಿಗೆ ಸುಧಾಕರ್ ತಿರುಗೇಟು
ಅಧಿಕಾರಕ್ಕೆ ಬಂದ ಒಂದು ವಾರದೊಳಗೆ ಮತಾಂತರ ನಿಷೇಧ ಕಾಯ್ದೆ ರದ್ದು ಮಾಡ್ತೀವಿ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರವಾಗಿ ಸಚಿವ ಸುಧಾಕರ್ ಮಾತನಾಡಿ, ಅವರು ಅಧಿಕಾರಕ್ಕೆ ಬರಲ್ಲ, ಅದಾಗಲ್ಲ. ಅದಕ್ಕೇ ಹಾಗೆ ಹೇಳಿದ್ದಾರೆ. ಅವರು ಹೇಳಿದ್ದೆಲ್ಲಾ ಆಗಲ್ಲ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಭಾರತವು ವಿಶ್ವದ ಎರಡನೇ ಅತಿದೊಡ್ಡ ಸ್ಟಾರ್ಟಪ್ ಕೇಂದ್ರವಾಗಿ ಹೊರಹೊಮ್ಮಿದೆ: ಪ್ರಧಾನಿ ಮೋದಿ