ಬೆಂಗಳೂರು: ಕಳೆದ 3 ವರ್ಷಗಳ ಹಿಂದೆ ಪ್ರಕರಣವೊಂದರಲ್ಲಿ ರಾಜಿ ಸಂಧಾನ ಮಾಡಿಕೊಳ್ಳಲು ಆರೋಪಿ ಬಳಿ ಲಂಚಕ್ಕೆ ಬೇಡಿಕೆಯಿಟ್ಟು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದ ಚಿಕ್ಕಜಾಲ ಹೆಡ್‌ಕಾನ್ಸ್‌ಟೇಬಲ್‌ಗೆ 23ನೇ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ 4 ವರ್ಷ ಜೈಲು ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಚಿಕ್ಕಜಾಲ ಪೊಲೀಸ್ ಠಾಣೆಯ ಹೆಡ್‌ಕಾನ್ಸ್‌ಟೇಬಲ್ ಎಂ.ಕೆ.ಮಂಜಣ್ಣ ಅಪರಾಧಿಯಾಗಿದ್ದಾನೆ.
2017ರಲ್ಲಿ ಮಂಜಣ್ಣ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಹೆಡ್‌ಕಾನ್ಸ್‌ಟೇಬಲ್ ಆಗಿದ್ದ. 2017ರ ಜೂನ್‌ನಲ್ಲಿ ಬಾಗಲಗುಂಟೆಯ ನಿವಾಸಿಯೊಬ್ಬರ ವಿರುದ್ಧ ಬಾಗಲುಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಬಂಧನದ ಸಮಯದಲ್ಲಿ ದೂರುದಾರರ ಟಿ.ವಿ.ಎಸ್.ವಿಕ್ಟರ್ ದ್ವಿಚಕ್ರ ವಾಹನ ಮತ್ತು ಇತರೆ ವಸ್ತುಗಳನ್ನು ಬಾಗಲುಗುಂಟೆ ಪೊಲೀಸ್ ಸಿಬ್ಬಂದಿ ಪಡೆದುಕೊಂಡಿದ್ದರು.
ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ದೂರುದಾರರಿಂದ ಪಡೆದುಕೊಂಡಿದ್ದ ದ್ವಿಚಕ್ರ ವಾಹನ ಮತ್ತು ಇತರೆ ವಸ್ತುಗಳನ್ನು ವಾಪಸ್ಸು ನೀಡುವ ಸಲುವಾಗಿ ಮಂಜಣ್ಣ ಇವರನ್ನು ಸಂಪರ್ಕಿಸಿದ್ದ. ಈ ಪ್ರಕರಣದಲ್ಲಿ ದೂರುದಾರರೊಂದಿಗೆ ರಾಜಿ ಮಾಡಿಕೊಂಡು ಪ್ರಕರಣ ಮುಕ್ತಾಯ ಮಾಡಲು 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ. ಲಂಚ ಕೊಡಲು ಇಚ್ಛಿಸದ ದೂರುದಾರರು ಎಸಿಬಿ ಗಮನಕ್ಕೆ ತಂದಿದ್ದರು.
10 ಸಾವಿರ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ:
2017 ಜು.15ರಂದು ದೂರುದಾರರಿಂದ 10 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಮಂಜಣ್ಣ ಎಸಿಬಿ ಬಲೆಗೆ ಬಿದ್ದಿದ್ದ. ಪ್ರಕರಣದ ತನಿಖೆ ನಡೆಸಿದ ಎಸಿಬಿ ಅಧಿಕಾರಿಗಳು ಆರೋಪಿ ಮಂಜಣ್ಣನ ವಿರುದ್ಧ 23ನೇ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯಕ್ಕೆ 2018ರಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 3 ವರ್ಷಗಳಿಂದ ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್ ಮಂಜಣ್ಣನ ಮೇಲಿನ ಆರೋಪಕ್ಕೆ ಸೂಕ್ತ ಸಾಕ್ಷ್ಯ ಸಿಕ್ಕಿದ ಹಿನ್ನೆಲೆಯಲ್ಲಿ ಸೆ.29ರಂದು ಆತನನ್ನು ಅಪರಾಧಿ ಎಂದು ಘೋಷಿಸಿದೆ. ಜೊತೆಗೆ 4 ವರ್ಷ ಜೈಲು ಹಾಗೂ 1 ಲಕ್ಷ ರೂಗಳ ದಂಡ ವಿಧಿಸಿ ಆದೇಶ ನೀಡಿದೆ.