ಬೆಂಗಳೂರು: ನನಗೆ ರಾಹುಕಾಲ ಗುಳಿಕಕಾಲ ಏನೂ ಇಲ್ಲ. ಯಾವ ಕಾಲದಲ್ಲಿ ಮಾತನಾಡಿದರೂ ನನಗೆ ಪವರ್ ಇದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಸ್ಯ ಚಟಾಕಿ ಹಾರಿಸಿದರು. ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ಆರಂಭದ ಮುನ್ನ ರೇವಣ್ಣ ರಾಹುಕಾಲ ಗುಳಿಕಾಲ ನೋಡಿಕೊಂಡು ಬಂದಿದ್ದಾರೆ ಎಂದು ಸಚಿವ ಆರ್ ಅಶೋಕ್ ಅವರ ಕಾಲೆಳೆದರು. ರೇವಣ್ಣ ರಾಹುಕಾಲ ಗುಳಿಕಾಲ ನೋಡಿಕೊಂಡು ಬಂದಿದ್ದಾರೆ. ಅವರನ್ನು ಮಾತನಾಡಲು ಬಿಟ್ಟು ಬಿಡಿ. ಟೈಂ ಮೀರಿದ್ರೆ ರೇವಣ್ಣ ಮಾತನಾಡಲ್ಲ ಎಂದರು.
ಅದಕ್ಕೆ ಪ್ರತಿಕ್ರಿಯಿಸುತ್ತಾ ರೇವಣ್ಣ, ನನಗೆ ರಾಹುಕಾಲ ಗುಳಿಕ ಕಾಲ ಏನೂ ಇಲ್ಲ. ಯಾವ ಕಾಲದಲ್ಲಿ ಮಾತನಾಡಿದರೂ ಪವರ್ ಇದೆ ಎಂದು ಹೇಳುವ ಮೂಲಕ ಸದನದಲ್ಲಿದ್ದವರನ್ನು ನಗುವಂತೆ ಮಾಡಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅಷ್ಟು ವರ್ಷ ಆಡಳಿತದಲ್ಲಿದ್ದ ನೀವು ಏನು ಮಾಡಿದ್ದೀರಾ?. ಮೀಸಲಾತಿ ಕೊಡಲು ನಮ್ಮ ದೇವೇಗೌಡರು ಬರಬೇಕಾಯಿತು. ನಿಮ್ಮ ಸಾಧನೆ ಏನು ಎಂದು ಕೈ ನಾಯಕರ ವಿರುದ್ಧ ಗುಡುಗಿದರು.
ಹೆಚ್ಡಿಕೆ....ಕರ್ಮಭೂಮಿ ವಾಸ್ತವ್ಯ ಏನಿದ್ದರೂ ಕೇತಗಾನ ಹಳ್ಳಿಯಲ್ಲಿ. ಇವಾಗ ವೆಸ್ಟೆಂಡ್ ಹೋಟೆಲ್ನಲ್ಲಿ ಇಲ್ಲ. ಮುಂದಕ್ಕೂ ಇರಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸದನದಲ್ಲೇ ಘೋಷಿಸಿದರು. ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಇವಾಗ ಅದೇ ಜಮೀನಿನಲ್ಲಿ ವಾಸ ಹೊಂದಿದ್ದೇನೆ. ಬೇಕಾದಾಗ ಬೆಂಗಳೂರಿಗೆ ಬರುತ್ತೇವೆ ಅಷ್ಟೇ. ಇನ್ನೇನಿದ್ದರೂ ನನ್ನ ವಾಸ್ತವ್ಯ ಅಲ್ಲೇ. ನನ್ನ ವಾಸ್ತವ್ಯ ಏನಿದ್ದರೂ ನನ್ನ ಜಮೀನಿನಲ್ಲಿ. ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ಅಲ್ಲ. ಮುಂದೆ ಹೊಟೇಲ್ಗೆ ಹೋಗುವುದಿಲ್ಲ. ಕೆಲಸ ಇದ್ರೆ ಬೆಂಗಳೂರಿಗೆ ಬರುತ್ತೇನೆ ಎಂದರು.
ಇದನ್ನೂ ಓದಿ: ಗಂಗಾವತಿಯ ಇಸ್ಪೀಟ್ ಕ್ಲಬ್ಗಳ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ
ಇವರೇನು ರೈತರ ಮಕ್ಕಳಾ? ಮಣ್ಣಿನ ಮಕ್ಕಳಾ ಎಂದು ಹೇಳ್ತಾರೆ ಕೆಲವರು. ಒಂದೇ ವರ್ಷದಲ್ಲಿ ನನ್ನ ಜಮೀನಿನಲ್ಲಿ 4.30 ಲಕ್ಷ ರೂ. ಮೌಲ್ಯದ ಬಾಳೆ ಬೆಳೆದು ಬಿಲ್ ತೆಗೆದುಕೊಂದಿದ್ದೇನೆ ಎಂದು ಟೀಕಾಕಾರರಿಗೆ ಇದೇ ವೇಳೆ, ತಿರುಗೇಟು ನೀಡಿದರು..