ಬೆಂಗಳೂರು : ಹೆಚ್ಚುತ್ತಿರುವ ಕೋವಿಡ್ ನಿಯಂತ್ರಣ ಮಾಡಬೇಕಾದರೆ ಲಾಕ್‌ಡೌನ್ ಮಾಡುವುದು ಸೂಕ್ತ. ಹಾಗಾಗಿ, ಸರ್ಕಾರ ತಕ್ಷಣ ಲಾಕ್‌ಡೌನ್ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ವರ್ಚ್ಯುವಲ್ ಮೂಲಕ ಆಸ್ಪತ್ರೆಯಿಂದಲೇ ಭಾಗವಹಿಸಿ ಮಾತನಾಡಿದ ಅವರು, ಜನರ ಜೀವ ಉಳಿಯಬೇಕಾದರೆ ಲಾಕ್‌ಡೌನ್ ಅಗತ್ಯವಿದೆ. ಹಾಗಾಗಿ, ಕನಿಷ್ಠ 15 ದಿನಗಳಾದರೂ ಲಾಕ್‌ಡೌನ್ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ಬೆಂಗಳೂರು ಸೇರಿ ಹೆಚ್ಚು ಕೋವಿಡ್ ಕೇಸ್ ಪತ್ತೆಯಾಗುತ್ತಿರುವ ಸ್ಥಳಗಳಲ್ಲಿ ತಕ್ಷಣ ಲಾಕ್‌ಡೌನ್ ಮಾಡಬೇಕು. ನೈಟ್ ಕರ್ಫ್ಯೂ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಲಾಕ್‌ಡೌನ್ ಮಾಡುವುದರಿಂದ ಸೋಂಕು ತಹಬದಿಗೆ ತರಲು ಸಾಧ್ಯ. ಲಾಕ್‌ಡೌನ್ ಮಾಡಿದರೆ ಬಡವರಿಗೆ ಒಂದು ತಿಂಗಳು ಆರ್ಥಿಕ ಸಹಾಯ ಮಾಡಬೇಕು ಎಂದು ಸರ್ಕಾರಕ್ಕೆ ಸಲಹೆ ಮಾಡಿದರು.
ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ ಬರುತ್ತಿರುವ ವಲಸಿಗರನ್ನು ತಡೆಯಬೇಕು. ಇಲ್ಲದಿದ್ದರೆ ಕೊರೊನಾ ಸೋಂಕು ಮತ್ತಷ್ಟು ಹೆಚ್ಚಾಗುತ್ತದೆ. ನಾನು ಸರ್ಕಾರದ ಬಗ್ಗೆ ಆಗಲಿ ಅಥವಾ ಯಾವುದೇ ವ್ಯಕ್ತಿ ಬಗ್ಗೆಯಾಗಲಿ ದೂಷಿಸಲು ಹೋಗಲ್ಲ.
ಕಳೆದ ನವೆಂಬರ್ನಲ್ಲೇ ಸರ್ಕಾರದ ಗಮನ ಸೆಳೆದರೂ ಎಚ್ಚೆತ್ತುಕೊಂಡಿಲ್ಲ. ಸ್ಮಶಾನ ನಿರ್ಮಾಣ ಮಾಡುವುದು ಬೇರೆ, ಮೊದಲು ಜೀವ ರಕ್ಷಣೆ ಮಾಡಬೇಕು ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಸರ್ಕಾರ ಒಂದು ವರ್ಷ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸಿ, ಕೊರೊನಾ ಸೋಂಕು ನಿಯಂತ್ರಣಕ್ಕೆ ಹೆಚ್ಚು ಒತ್ತು ನೀಡಬೇಕು. ಕೊರೊನಾ ಒಂದೇ ಅಲ್ಲ. ಮಾನ್ಸೂನ್ ಮಳೆ ಬಗ್ಗೆಯೂ ಗಮನ ಹರಿಸಬೇಕಿದೆ. ಮುಂದಿನ ದಿನಗಳಲ್ಲಿ ಮಳೆ ಅನಾಹುತದ ಬಗ್ಗೆಯೂ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.
ಬಿಬಿಎಂಪಿ ಅಧಿಕಾರಿಗಳು ಕೇವಲ ಕೊರೊನಾ ಬಗ್ಗೆ ಚರ್ಚೆ ಮಾಡುವುದು ಬಿಟ್ಟು ಮಳೆಗಾಲದ ಬಗ್ಗೆಯೂ ಚರ್ಚೆ ಮಾಡಬೇಕಿದೆ ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳಿಗೆ 12ನೇ ತರಗತಿ ಪರೀಕ್ಷೆ ಮುಖ್ಯವಾಗಿದೆ. ಕೊರೊನಾ ಸೋಂಕಿನ ನಡುವೆ ಯಾವ ರೀತಿ ಪರೀಕ್ಷೆ ನಡೆಸಬೇಕೆಂಬುದರ ಬಗ್ಗೆ ಶಿಕ್ಷಣ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಾವು ಸರ್ಕಾರಕ್ಕೆ ಸಹಕಾರ ನೀಡಲು ಸಿದ್ಧ. ಬಡವರು, ಕೂಲಿ ಕಾರ್ಮಿಕರಿಗೆ ಒಂದು ತಿಂಗಳ ಮಟ್ಟಿಗೆ ಆರ್ಥಿಕ ನೆರವು ಘೋಷಣೆ ಮಾಡಿ ಎಂದು ಸಲಹೆ ನೀಡಿದರು. ಕೊರೊನಾ ಪಾಸಿಟಿವ್ನಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಎಂ ಯಡಿಯೂರಪ್ಪ ಅವರು ಗುಣಮುಖರಾಗಿ ದೈನಂದಿನ ಕೆಲಸಗಳಲ್ಲಿ ತೊಡಗಲಿ ಎಂದು ಆಶಿಸಿದರು.