ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ದೊಡ್ಡ ಸುದ್ದಿಯಲ್ಲಿದ್ದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವಿನ ವಾಕ್ಸಮರಕ್ಕೆ ಇಂದು ಕಡಿವಾಣ ಬಿದ್ದಿದೆ. ಉಭಯ ನಾಯಕರು ಮೌನಕ್ಕೆ ಶರಣಾಗಿದ್ದು, ಮುಂದಿನ ದಿನಗಳಲ್ಲಿ ಇಬ್ಬರ ಮಾತಿನೇಟಿಗೆ ಬೀಗ ಬೀಳುತ್ತಾ ಎನ್ನುವ ಚರ್ಚೆ ಆರಂಭವಾಗಿದೆ.
ಸಂಸದೆ ಸುಮಲತಾ ಅವರು ತಮ್ಮ ಜೆ.ಪಿ. ನಗರ ನಿವಾಸದಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಬೆಳಗ್ಗೆಯಿಂದ ಮನೆಯಾಚೆ ಬಂದಿಲ್ಲ. ಅಲ್ಲದೇ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡಿಲ್ಲ. ಆಕ್ರೋಶ ವ್ಯಕ್ತಪಡಿಸಿಲ್ಲ. ದಿಢೀರ್ ಮೌನಕ್ಕೆ ಶರಣಾಗಿರುವ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಇನ್ನೊಮ್ಮೆ ಹೇಳಿಕೆ ನೀಡುವವರೆಗೂ ಮತ್ತೆ ಮಾತಿನ ಅಖಾಡಕ್ಕೆ ಇಳಿಯಬಾರದು ಎಂದು ತೀರ್ಮಾನಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ತಮ್ಮ ನಿವಾಸದ ಮುಂದಿರುವ ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದ ಇಬ್ಬರೂ ನಾಯಕರು ಇಂದು ಮೌನವಾಗಿದ್ದಾರೆ. ಸುಮಲತಾ ತಮ್ಮ ಜೆ.ಪಿ.ನಗರ ನಿವಾಸದಲ್ಲಿ ಹಾಗೂ ಹೆಚ್ಡಿಕೆ ತಮ್ಮ ಕೆ.ಎಂ.ದೊಡ್ಡಿ ನಿವಾಸದಲ್ಲಿ ತಮ್ಮ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಕುಮಾರಸ್ವಾಮಿ ಸಹ ಇಂದು ತಮ್ಮ ದಿನವನ್ನು ಕಾರ್ಯಕರ್ತರ ಭೇಟಿಗೆ ಮೀಸಲಾಗಿಟ್ಟಿದ್ದಾರೆ. ಇಬ್ಬರೂ ನಾಯಕರೂ ಮಾಧ್ಯಮಗಳ ಮುಂದೆ ಬಂದು ಯಾವುದೇ ಹೇಳಿಕೆ ನೀಡುವ ಕಾರ್ಯ ಮಾಡುತ್ತಿಲ್ಲ. ಸದ್ಯಕ್ಕೆ ಇಬ್ಬರ ನಡುವಿನ ಕಲಹಕ್ಕೆ ತಾತ್ಕಾಲಿಕ ವಿರಾಮ ಬಿದ್ದಂತಾಗಿದೆ.
ಬಾಂಬ್ ಸಿಡಿಯುವುದು ಅನುಮಾನ
ಸಾಕಷ್ಟು ದೊಡ್ಡ ಮಟ್ಟದಲ್ಲಿ ಮಾಡಿಕೊಂಡ ವಾಕ್ಸಮರದಿಂದಾಗಿ ಜನರ ಮುಂದೆ ತಾವು ನಗಣ್ಯರಾಗುತ್ತಿದ್ದೇವೆ. ಇದೇ ಸ್ಥಿತಿ ಮುಂದುವರಿದರೆ ನಗೆಪಾಟಲಿಗೆ ಈಡಾಗಬೇಕಾಗುತ್ತದೆ. ಪರಸ್ಪರ ತಮ್ಮ ಬಗ್ಗೆಯೇ ಜನ ಅನುಮಾನ ವ್ಯಕ್ತಪಡಿಸುವ ಸಾಧ್ಯತೆ ಇರುವ ಹಿನ್ನೆಲೆ, ಇಬ್ಬರೂ ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಸುಮಲತಾ ಹಾಗೂ ಅವರ ಅಕ್ಕಪಕ್ಕ ಇರುವವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದರು. ಇದರ ಜತೆ ಕೆಆರ್ಎಸ್ ವಿಚಾರವಾಗಿಯೂ ತಗಾದೆ ತೆಗೆದಿದ್ದರು. ಇದೀಗ ಇವೆಲ್ಲವೂ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಬಹುದು. ತಮ್ಮ ಲೆಕ್ಕಾಚಾರ ತಲೆಕೆಳಗಾಗಬಹುದು. ಅಲ್ಲದೇ, ಸುಮಲತಾ ಸಿಎಂ ಭೇಟಿಯಾಗಿ ಬಂದ ಮೇಲೆ ಕೊಂಚ ತಣ್ಣಗಾಗಿದ್ದಾರೆ. ಈ ಎಲ್ಲಾ ಲೆಕ್ಕಾಚಾರ ಹಿನ್ನೆಲೆ ಇಲ್ಲೇ ವಿವಾದ ಕೈಬಿಡುವ ನಿರ್ಧಾರ ಕೈಗೊಂಡರೂ ಅಚ್ಚರಿ ಇಲ್ಲ ಎಂದಿದ್ದಾರೆ.
ಅಲ್ಲದೇ ದಾಖಲೆ ನೀಡುವಂತೆ, ಆಡಿಯೋ ಬಿಡುಗಡೆ ಮಾಡುವಂತೆ ಸುಮಲತಾ ಅವರು ಹೆಚ್ಡಿಕೆಗೆ ಸವಾಲು ಹಾಕಿದ್ದಾರೆ. ಇದೀಗ ದಾಖಲೆ ಬಿಡುಗಡೆ ಆಗುವವರೆಗೂ ಸುಮ್ಮನಿರಲು ಸುಮಲತಾ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಸದ್ಯ ಇಂದು ಯಾವುದೇ ಹೇಳಿಕೆ ನೀಡದೇ ಮೌನಕ್ಕೆ ಶರಣಾಗಿದ್ದಾರೆ. ಸಂಜೆಯವೇಳೆಗೆ ಕಂಡುಬರುವ ಬೆಳವಣಿಗೆ, ಮಾತುಗಳನ್ನು ಗಮನಿಸಿ, ಅಗತ್ಯ ಬಿದ್ದರೆ ಮಾಧ್ಯಮಗಳ ಮುಂದೆ ಸುಮಲತಾ ಬರುವ ಸಾಧ್ಯತೆ ಇದೆ. ಆದರೆ ಈ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಅಂಬರೀಶ್ ಸ್ಮಾರಕ ನಿರ್ಮಾಣ ವಿಚಾರ: ಸುಮಲತಾ - ಹೆಚ್ಡಿಕೆ ವಾಕ್ಸರಮಕ್ಕೆ ಸಿಎಂ ಮುಲಾಮು