ಬೆಂಗಳೂರು: ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಕದ್ದು ಮುಚ್ಚಿ ಹೋಗಿ ಯಾರನ್ನೂ ಭೇಟಿ ಮಾಡುವ ಅವಶ್ಯಕತೆ ಇಲ್ಲವೆಂದು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ವಿಧಾನ ಪರಿಷತ್ ಸದಸ್ಯ ಸಿ. ಪಿ. ಯೋಗೇಶ್ವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತಮಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಅವರು ಹೇಳಿದಂತೆ ಒಂದು ಕಾಲದಲ್ಲಿ ಕುಮಾರಸ್ವಾಮಿ ಅಧಿಕಾರ ಮಾಡಿದ್ದಾರೆ. ರಾಜಕಾರಣಿಗಳು ಸುಮ್ಮನೆ ಈ ರೀತಿ ಮತ್ತೊಬ್ಬರ ಬಗ್ಗೆ ಲಘುವಾಗಿ ಮಾತನಾಡಬಾರದು ಎಂದು ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಸಿ.ಪಿ. ಯೋಗೇಶ್ವರ್ ಮಾಡಿರುವ ಆರೋಪಕ್ಕೆ ಏನಾದರೂ ಸಾಕ್ಷಿ, ಆಧಾರ ಇದೆಯಾ ಎಂದು ಪ್ರಶ್ನಿಸಿದರು.
ಜೆಡಿಎಸ್ ಕಾರ್ಯಕರ್ತರನ್ನು ಡಿ ಕೆ ಬ್ರದರ್ಸ್ ಕಾಂಗ್ರೆಸ್ಗೆ ಸೆಳೆಯುತ್ತಾರೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ದೇವೇಗೌಡರು, ನಾನು ಊಹಾಪೋಹದ ಮಾತುಗಳಿಗೆ ಉತ್ತರ ನೀಡಲ್ಲ. ನನಗೂ ಸಾಕಷ್ಟು ರಾಜಕೀಯ ಅನುಭವ ಇದೆ. ಏನು ನಡೆಯುತ್ತಿದೆ ಎಂಬುದು ಗೊತ್ತಿದೆ. ಅವರ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬರುವುದಾದರೆ ಬನ್ನಿ ಎಂದಿದ್ದಾರೆ. ಸೂಕ್ತ ಸಂದರ್ಭದಲ್ಲಿ ಈ ಬಗ್ಗೆ ನಾನು ಮಾತನಾಡುತ್ತೇನೆ ಎಂದು ಹೇಳಿದ್ರು.
ಸಬ್ ಇನ್ಸ್ ಪೆಕ್ಟರ್ ಕಿರಣ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಂಪೂರ್ಣ ತನಿಖೆ ಆಗಬೇಕು. ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಹಿಂಸೆ ಕೊಟ್ಟಿದ್ದಾರೆಂದು ಹೇಳುತ್ತಿದ್ದಾರೆ. ಗೃಹ ಸಚಿವರು ಇದರ ಬಗ್ಗೆ ಸೂಕ್ತ ತನಿಖೆ ಮಾಡಿಸಬೇಕು. ಇದನ್ನು ಸರ್ಕಾರ ಸರಿಯಾದ ತನಿಖೆ ಮಾಡದೇ ಹೋದರೆ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ. ಗೃಹ ಸಚಿವರು ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಹೋರಾಟದ ಪೂರ್ವಭಾವಿ ಸಭೆ:
ರಾಜ್ಯ ಸರ್ಕಾರದ ಜನ ವಿರೋಧಿ ಕಾಯ್ದೆ ತಿದ್ದುಪಡಿಗಳ ಬಗ್ಗೆ ಪ್ರತಿಭಟಿಸಲು ಪೂರ್ವಭಾವಿ ಸಭೆ ಆಗಸ್ಟ್ 4 ರಂದು ಕರೆದಿದ್ದೇವೆ. ಜೆ ಪಿ ಭವನದಲ್ಲಿ ಅಂದು ಬೆಳಗ್ಗೆ 11 ಗಂಟೆಗೆ ಸಭೆ ಕರೆಯಲಾಗಿದ್ದು, 200 ಮಂದಿಗೆ ಸಭೆಯನ್ನು ಸೀಮಿತಗೊಳಿಸಲಾಗಿದೆ. ಜೆಡಿಎಸ್ ಪಕ್ಷದ ಶಾಸಕರು, ಸೋತ ಅಭ್ಯರ್ಥಿಗಳು, ಜಿಲ್ಲಾಧ್ಯಕ್ಷರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ತಾಲೂಕು ಅಧ್ಯಕ್ಷರ ಸಭೆಯನ್ನು ಮತ್ತೊಂದು ಬಾರಿ ನಡೆಸಲು ನಿರ್ಧರಿಸಲಾಗಿದೆ ಎಂದು ದೊಡ್ಡಗೌಡ್ರು ತಿಳಿಸಿದರು.
ಕೊರೊನಾ ಇದ್ದರೂ ನಾವು ಯಾವ ರೀತಿ ಹೋರಾಟ ಮಾಡಬೇಕೆಂಬುದರ ಬಗ್ಗೆ ಸಮಾಲೋಚನೆ ಮಾಡುತ್ತೇವೆ. ರಾಜ್ಯಾದ್ಯಂತ ಯಾವ ರೀತಿ ಪ್ರತಿಭಟನೆ ಮಾಡಬೇಕೆಂಬುದರ ಕುರಿತು ಆ.4 ರಂದು ನಡೆಯುವ ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.
ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಆಹ್ವಾನಿತರನ್ನು ಹೊರತುಪಡಿಸಿ ಇತರರು ಸಭೆಯಲ್ಲಿ ಭಾಗವಹಿಸುವಂತಿಲ್ಲ. ಅಲ್ಲದೇ, ಸಭೆಯಲ್ಲಿ ಭಾಗವಹಿಸುವ ಎಲ್ಲಾ ಆಹ್ವಾನಿತರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಜ್ವರ, ನೆಗಡಿ ಇರುವಂತಹ ಮುಖಂಡರು ಸಭೆಗೆ ಬರಬಾರದು ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರದ ರೈತ ವಿರೋಧಿ ಕಾಯ್ದೆ ತಿದ್ದುಪಡಿ ಬಗ್ಗೆ ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ. ಜೊತೆಗೆ ಅಧಿವೇಶನ ಕರೆಯಲು ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಇದರ ಬಗ್ಗೆ ಕೂಡ ರಾಜ್ಯಪಾಲರ ಗಮನಕ್ಕೆ ತರುತ್ತೇನೆ ಎಂದು ಹೆಚ್ ಡಿ ದೇವೇಗೌಡ ಹೇಳಿದರು.