ಹೈದರಾಬಾದ್: ಉಕ್ರೇನ್ ಮೇಲೆ ರಷ್ಯಾ ದಾಳಿಯ ತೀವ್ರತೆ ಹೆಚ್ಚಾಗಿದ್ದು, 6ನೇ ದಿನವಾದ ನಿನ್ನೆ ಉಕ್ರೇನ್ ಖಾರ್ಕೀವ್‌ನಲ್ಲಿ ಹಾವೇರಿ ಮೂಲದ ನವೀನ್ ರಷ್ಯಾ ಪಡೆಗಳ ದಾಳಿಗೆ ಬಲಿಯಾಗಿದ್ದರು. ಯುದ್ಧದಿಂದಾಗಿ ಭಾರತದ ವಿದ್ಯಾರ್ಥಿಯೊಬ್ಬ ಮೃತ ಪಟ್ಟ ಮೊದಲ ಪ್ರಕರಣ ಇದಾಗಿದೆ.
ಹಾವೇರಿ ಜಿಲ್ಲೆ ಚಳಗೇರಿಯ ಶೇಖಪ್ಪ - ವಿಜಯಲಕ್ಷಿ ಅವರ ದ್ವಿತೀಯ ಪುತ್ರ ನವೀನ್ ಓದಿನಲ್ಲಿ ತುಂಬಾ ಚುರುಕಾಗಿದ್ದ. ರಾಣೆಬೆನ್ನೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದ ಈತ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿರುವ ಯುನಿಟಿ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದರು. ಎಸ್‌ಎಸ್‌ಎಲ್‌ಸಿಯಲ್ಲಿ 625ಕ್ಕೆ 606 ಅಂಕಗಳನ್ನು ಪಡೆದು ಶಾಲೆಗೆ ಟಾಪರ್ ಆಗಿದ್ದರು.
ಪಿಯುಸಿಯಲ್ಲಿ ನವೀನ್ ಶೇ.97ರಷ್ಟು ಅಂಕಗಳನ್ನು ಗಳಿಸಿದ್ದು ವಿಶೇಷ. ನಂಜನಗೂಡಿನಲ್ಲಿ 6 ರಿಂದ ಪಿಯುವರೆಗೆ ಓದಿದ್ದ. ಆ ಬಳಿಕ ವೈದ್ಯನಾಗಬೇಕೆಂಬ ಕನಸು ಕಂಡಿದ್ದ ನವೀನ್‌ಗೆ ಭಾರತದಲ್ಲಿ ಎಂಬಿಬಿಎಸ್ ಓದಿಗೆ ಬೇಕಾಗುವಷ್ಟು ಹಣ ಇಲ್ಲದ ಕಾರಣ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಪದವಿ ಪಡೆಯಲು ಉಕ್ರೇನ್‌ಗೆ ತೆರಳಿದ್ದರು.
ಉಕ್ರೇನ್ ಖಾರ್ಕೀವ್ ನ್ಯಾಶನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ 4ನೇ ವರ್ಷದ ಎಂಬಿಬಿಎಸ್ ಮಾಡುತ್ತಿದ್ದ ನವೀನ್ ನಿನ್ನೆ ರಷ್ಯಾ ಸೇನೆ ನಡೆಸಿದ ದಾಳಿಯಿಂದ ಸಾವನ್ನಪ್ಪಿದ್ದಾನೆ. ದೇಶದಲ್ಲಿನ ಶಿಕ್ಷಣದ ವ್ಯವಸ್ಥೆ ಬಗ್ಗೆ ನವೀನ್ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್‌ನಲ್ಲಿ ಪರಿಸ್ಥಿತಿ ಮತ್ತಷ್ಟು ಭೀಕರ.. ನವೀನ್ ಪಾರ್ಥಿವ ಶರೀರ ತರುವ ಬಗ್ಗೆ ರಾಯಭಾರಿ ಕಚೇರಿ ಅಧಿಕಾರಿಗಳು ಹೇಳಿದ್ದೇನು?