ಬೆಂಗಳೂರು: ದೇಶದ ನೆಚ್ಚಿನ ಪ್ರವಾಸಿ ತಾಣಗಳಲ್ಲಿ ಸಿಲಿಕಾನ್ ಸಿಟಿ ಕೂಡ ಒಂದು. ದೇಶ - ವಿದೇಶಿ ಪ್ರವಾಸಿಗರ ಫೇವರಿಟ್ ತಾಣಗಳ ಪಟ್ಟಿಯಲ್ಲಿರುವ ಉದ್ಯಾನ ನಗರಿಯಲ್ಲಿ ಅನ್ಲಾಕ್ 5.0ರ ನಂತರ ಪ್ರವಾಸೋದ್ಯಮ ಚೇತರಿಕೆ ಹಾದಿ ಹಿಡಿಯುತ್ತಿದೆ.
ಕಾಸ್ಮೋ ಪಾಲಿಟನ್ ಸಿಟಿ ಬೆಂಗಳೂರು ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿದೆ. ಸಿಲಿಕಾನ್ ಸಿಟಿ ಎನ್ನುವ ಹೆಗ್ಗಳಿಕೆಯೊಂದಿಗೆ ಪ್ರವಾಸಿ ತಾಣವಾಗಿಯೂ ಗಮನ ಸೆಳೆದಿದೆ. ರಾಜಧಾನಿಗೆ ಬರುವ ಪ್ರವಾಸಿಗರನ್ನು ಹತ್ತು ಹಲವು ತಾಣಗಳು ಕೈಬೀಸಿ ಕರೆಯುತ್ತವೆ.
ಬೆಂಗಳೂರಿನ ಪ್ರವಾಸಿ ತಾಣಗಳು: ಚಾಮರಾಜ ಒಡೆಯರ್ ಉದ್ಯಾನ, ಲಾಲ್ ಬಾಗ್ ಸಸ್ಯೋದ್ಯಾನ, ಬೆಂಗಳೂರು ಅರಮನೆ, ವಿಧಾನಸೌಧ, ದೊಡ್ಡ ಆಲದ ಮರ, ಇಸ್ಕಾನ್ ದೇವಸ್ಥಾನ, ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ, ಬನ್ನೇರುಘಟ್ಟ ಜೈವಿಕ ಉದ್ಯಾನ, ಬ್ಯೂಗಲ್ ರಾಕ್ ಪಾರ್ಕ್, ಬೆಂಗಳೂರು ಕೋಟೆ, ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, ವೆಂಕಟಪ್ಪ ಆರ್ಟ್ ಗ್ಯಾಲರಿ, ವಿಶ್ವೇಶ್ವರಯ್ಯ ಮ್ಯೂಸಿಯಂ, ಚಿನ್ನಸ್ಚಾಮಿ ಕ್ರೀಡಾಂಗಣ, ಲುಂಬಿನಿ ಗಾರ್ಡನ್, ಕರ್ನಾಟಕ ಸರ್ಕಾರ ಮ್ಯೂಸಿಯಂ.
ಜೊತೆಗೆ ಸ್ಯಾಂಕಿಕೆರೆ, ನೆಹರೂ ತಾರಾಲಯ, ಹೈಕೋರ್ಟ್ ಕೂಡ ಆಕರ್ಷಣೆ ಕೇಂದ್ರ ಬಿಂದುವಾಗಿವೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳೂ ಪ್ರಮುಖ ತಾಣಗಳಾಗಿವೆ. ಲಾಕ್ಡೌನ್ ಜಾರಿಯಾದ ನಂತರ ಈ ಎಲ್ಲ ಪ್ರವಾಸಿ ತಾಣಗಳು ಸಹಜವಾಗಿಯೇ ಸ್ತಬ್ಧಗೊಂಡಿವೆ. ಅನ್ಲಾಕ್ ಪ್ರಕ್ರಿಯೆ ಆರಂಭಗೊಂಡ ನಂತರ ಹಂತ ಹಂತವಾಗಿ ಎಲ್ಲ ಪ್ರವಾಸೀ ತಾಣಗಳಲ್ಲಿ ಚಟುವಟಿಕೆ ಪುನಾರಂಭಗೊಂಡಿದೆ. ಅನ್ಲಾಕ್ 5.0 ಪ್ರವಾಸೋದ್ಯಮ ಕ್ಷೇತ್ರ ಸಂಪೂರ್ಣವಾಗಿ ತೆರೆದುಕೊಳ್ಳಲು ಸಹಕಾರಿಯಾಗಿದೆ. ಅದರಂತೆ ಬೆಂಗಳೂರಿನ ಲುಂಬಿನಿ ಗಾರ್ಡನ್ ಗುತ್ತಿಗೆ ವಿವಾದದಿಂದಾಗಿ ಆರಂಭಗೊಂಡಿಲ್ಲ. ಅದನ್ನು ಹೊರತುಪಡಿಸಿ ಇತರ ಎಲ್ಲ ಪ್ರವಾಸಿ ತಾಣಗಳು ಪ್ರವಾಸಿಗರಿಗೆ ಮುಕ್ತವಾಗಿವೆ.
ವಿಧಾನಸೌಧ ಮತ್ತು ಹೈಕೋರ್ಟ್ ಆವರಣದೊಳಗೆ ಪ್ರವಾಸಿಗರಿಗೆ ಅವಕಾಶ ಇಲ್ಲವಾದರೂ ಹೊರಭಾಗದಿಂದಲೇ ಕಟ್ಟಡದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಪೋಟೋ ತೆಗೆಸಿಕೊಳ್ಳಲು ಮುಕ್ತ ಅವಕಾಶವಿದೆ. ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನವಿದ್ದಲ್ಲಿ ಮಾತ್ರ ಅವಕಾಶ ನೀಡಲಾಗುತ್ತದೆ.
ಚೇತರಿಕೆಗೆ ಬೇಕಿದೆ 5-6 ತಿಂಗಳು: ಪ್ರವಾಸೋದ್ಯಮ ಚಟುವಟಿಕೆ ಕೊರೊನಾ ಮಾರ್ಗಸೂಚಿ ಪಾಲನೆಯೊಂದಿಗೆ ಗರಿಗೆದರಿದ್ದರೂ ಕೂಡ ಪ್ರವಾಸಿಗರ ಸಂಖ್ಯೆಯಲ್ಲಿ ಸಾಕಷ್ಟು ಕೊರತೆ ಇದೆ. ಕಳೆದ ಸಾಲಿಗೆ ಹೋಲಿಸಿದರೆ ಅತ್ಯಲ್ಪ ಪ್ರಮಾಣದ ಪ್ರವಾಸಿಗರು ಮಾತ್ರ ಬರುತ್ತಿದ್ದಾರೆ. ಕೇವಲ ಸ್ಥಳೀಯರು ಬರುತ್ತಿರುವುದು ಬಿಟ್ಟರೆ ಹೊರ ಜಿಲ್ಲೆ ಹೊರ ರಾಜ್ಯದವರ ಭೇಟಿ ವಿರಳವಾಗಿದೆ. ಸದ್ಯ ಅಂತಾರಾಷ್ಟ್ರೀಯ ವಿಮಾನ ಸಂಚಾರ ಇಲ್ಲದ ಕಾರಣ ವಿದೇಶ ಪ್ರವಾಸಿಗರ ಭೇಟಿಯೇ ಇಲ್ಲದಂತಾಗಿದ್ದು, ಮಹಾನಗರಿಯ ಪ್ರವಾಸೋದ್ಯಮ ಚಟುವಟಿಕೆಗೆ ಕೊಡಲಿ ಪೆಟ್ಟು ಬಿದ್ದಿದೆ. ಇನ್ನು ಐದಾರು ತಿಂಗಳುಗಳ ಕಾಲ ಪ್ರವಾಸೋದ್ಯಮ ಕ್ಷೇತ್ರದ ಚೇತರಿಕೆಗೆ ಸಮಯ ಬೇಕಾಗಬಹುದು ಎನ್ನಲಾಗುತ್ತಿದೆ.
ಮಹಾನಗರಿಯಲ್ಲಿ ಪ್ರವಾಸೋದ್ಯಮವನ್ನೇ ಬಹುಪಾಲು ನೆಚ್ಚಿಕೊಂಡ ತಾರಾ ಹೋಟೆಲ್ಗಳು ಪ್ರವಾಸಿಗರಿಲ್ಲದೇ ಖಾಲಿ ಹೊಡೆಯುತ್ತಿವೆ. ಹೋಟೆಲ್ ಉದ್ಯಮ ಬಹುಪಾಲು ಕುಸಿದುಹೋಗಿದೆ. ಪ್ರವಾಸಿಗರನ್ನೇ ನೆಚ್ಚಿಕೊಂಡಿದ್ದ ಪ್ರವಾಸಿ ವಾಹನ ಉದ್ಯಮವೂ ನೆಲಕಚ್ಚಿದೆ. ಇನ್ನು ಪ್ರವಾಸಿ ತಾಣದ ಇಕ್ಕೆಲಗಳಲ್ಲಿನ ಅಂಗಡಿ ಮುಂಗಟ್ಟುಗಳು, ದೇಸಿ ಉದ್ದಿಮೆಗಳು, ಕರಕುಶಲ ವಸ್ತುಗಳ ಉದ್ಯಮ ಕೂಡ ಸೊರಗಿ ಹೋಗಿದೆ.
ಪ್ರವಾಸಿಗರು ಮತ್ತು ಪ್ರವಾಸಿ ತಾಣಗಳ ನಡುವೆ ಪ್ರವಾಸಿ ವಾಹನಗಳು ಸೇತುವೆಯಾಗಿವೆ. ಆದರೆ, ವರ್ಕ್ ಫ್ರಂ ಹೋಂ, ಟೆಕ್ಕಿಗಳಿಗೆ ಕೆಲಸದ ಅಭದ್ರತೆ, ಸಾಕಷ್ಟು ಜನ ಕೆಲಸ ಕಳೆದುಕೊಂಡು, ಜನರ ಬಳಿ ಹಣ ಇಲ್ಲದಿರುವುದರಿಂದ ಜನ ಪ್ರವಾಸಕ್ಕೆ ಮುಂದಾಗುತ್ತಿಲ್ಲ. ವಿದೇಶಿ ಪ್ರವಾಸಿಗರಿಲ್ಲದಿರುವುದೂ ಮತ್ತೊಂದು ಕಾರಣ. ಇದರ ಜೊತೆ ಕೊರೊನಾ ಎರಡನೇ ಅಲೆ ಭೀತಿ ಕೂಡ ಎದುರಾಗಿರುವುದರಿಂದ ಪ್ರವಾಸೋದ್ಯಮ ಕ್ಷೇತ್ರ ಚೇತರಿಕೆ ಕಾಣಲು ಮತ್ತಷ್ಟು ಸಮಯ ಬೇಕಾಗಲಿದೆ. ಕೊರೊನಾ ಲಸಿಕೆ ಬಂದ ನಂತರವೇ ಚೇತರಿಕೆ ಕಾಣಲಿದೆ ಎಂದು ಬೆಂಗಳೂರು ಟ್ರಾವೆಲ್ ಆಪರೇಟರ್ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಅಭಿಪ್ರಾಯಪಟ್ಟಿದ್ದಾರೆ.