ಬೆಂಗಳೂರು/ಮಂಗಳೂರು: ಇಂಟರ್ನಶಿಪ್ಗಾಗಿ ಕಚೇರಿಗೆ ಬರುತ್ತಿದ್ದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಿಲುಕಿರುವ ಸರ್ಕಾರಿ ವಿಶೇಷ ಅಭಿಯೋಜಕ ಕೆ.ಎಸ್ಎನ್ ರಾಜೇಶ್ಗೆ ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ರಾಜೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಪೀಠ ಈ ಆದೇಶ ಮಾಡಿದೆ. ಆರೋಪಿ ವೃತ್ತಿಪರ ವಕೀಲನಾಗಿದ್ದು, ಪೊಲೀಸರು, ವಿಶ್ವವಿದ್ಯಾಲಯ ಹಾಗೂ ನ್ಯಾಯಾಧೀಶರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಲಾಗದು ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.
ದೂರುದಾರರ ಪರ ವಕೀಲರ ವಾದ ಏನು?
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ದೂರುದಾರರು ನೀಡಿರುವ ದೂರಿನಲ್ಲಿರುವ ಅಂಶಗಳ ಮೇರೆಗೆ ಐಪಿಸಿ ಸೆಕ್ಷನ್ 376 ಅಡಿ ಅತ್ಯಾಚಾರ ಪ್ರಕರಣ ದಾಖಲಿಸಲು ಬರುವುದಿಲ್ಲ. ಹಾಗೆಯೇ, ಐಪಿಸಿ ಸೆಕ್ಷನ್ 354ಎ ಅಡಿಯಲ್ಲಿ ಲೈಂಗಿಕ ಕಿರುಕುಳ ನೀಡಿರುವ ಆರೋಪಕ್ಕೆ ಮರಣದಂಡನೆ ಶಿಕ್ಷೆ ವಿಧಿಸಲಾಗದು. ‘
ಐಪಿಸಿ 354 ಆರೋಪಕ್ಕೆ 3 ವರ್ಷಗಳವರೆಗಷ್ಟೇ ಶಿಕ್ಷೆ ವಿಧಿಸಬಹುದು. ಜತೆಗೆ ದೂರು ನೀಡುವಲ್ಲಿಯೂ ವಿಳಂಬವಾಗಿದೆ. ಇನ್ನು ಸಂತ್ರಸ್ತೆ ಸಿಸಿಟಿವಿ ದೃಶ್ಯಾವಳಿ ನಾಶಪಡಿಸಲಾಗಿದೆ ಎಂದಿದ್ದಾರೆ. ಆದರೆ, ಅದನ್ನು ಈಗಲೂ ಪಡೆದುಕೊಳ್ಳಬಹುದು. ಪೊಲೀಸರ ಮುಂದೆ ಹಾಜರಾದ ವೇಳೆ ಅರ್ಜಿದಾರರನ್ನು ವೈದ್ಯಕೀಯ ಪರೀಕ್ಷೆಗೂ ಒಳಪಡಿಸಲಾಗಿದೆ. ಹೀಗಾಗಿ, ಅರ್ಜಿದಾರರನ್ನು ಪೊಲೀಸ್ ವಶಕ್ಕೆ ಪಡೆದು ತನಿಖೆ ನಡೆಸುವ ಅಗತ್ಯವಿಲ್ಲ. ಆದ್ದರಿಂದ ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಕೋರಿದರು.
(ಇದನ್ನೂ ಓದಿ: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ: ವಕೀಲರಿಗೆ ನ್ಯಾಯಾಂಗ ಬಂಧನ)
ಇದಕ್ಕೆ ಆಕ್ಷೇಪಿಸಿದ ಪ್ರಾಸಿಕ್ಯೂಷನ್ ಪರ ವಕೀಲರು, ಅರ್ಜಿದಾರರನ್ನು ಹೆಚ್ಚಿನ ವಿಚಾರಣೆ ನಡೆಸುವ ನಿಟ್ಟಿನಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಳ್ಳುವ ಅಗತ್ಯವಿದೆ. ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಕೆಲವೊಂದು ವಿಡಿಯೋ ಕ್ಲಿಪ್ಗಳನ್ನು ಪಡೆದುಕೊಳ್ಳಲು ಮೊಬೈಲ್ ಕೂಡ ಜಪ್ತಿ ಮಾಡಬೇಕಿದೆ. ಆರೋಪಿ ಪ್ರಭಾವಿಯಾಗಿದ್ದು, ಪೊಲೀಸರಿಗೆ, ನ್ಯಾಯಾಧೀಶರಿಗೆ ಲಂಚ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಆರೋಪಿ ವಿರುದ್ಧದ ಪ್ರಕರಣ ಹೀನ ಕೃತ್ಯವಾಗಿದ್ದು, ನಿರೀಕ್ಷಣಾ ಜಾಮೀನು ನೀಡಿದರೆ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇದೆ. ಆದ್ದರಿಂದ ಜಾಮೀನು ನೀಡಬಾರದು ಎಂದು ಕೋರಿದರು.
ವಾದ ಪ್ರತಿವಾದ ಆಲಿಸಿದ ಕೋರ್ಟ್ ಹೇಳಿದ್ದೇನು?
ವಾದ ಪ್ರತಿವಾದ ಆಲಿಸಿದ ಪೀಠ, ಅರ್ಜಿದಾರನ ವಿರುದ್ಧ ಅತ್ಯಾಚಾರ ನಡೆಸಲು ಯತ್ನಿಸಿದ ಆರೋಪವಿದೆ. ದೂರಿನಲ್ಲಿರುವ ಅಂಶಗಳನ್ನು ನೋಡಿದರೆ, ಆರೋಪಿ ಇಂಟರ್ನ್ಶಿಪ್ಗೆ ಬಂದಿದ್ದ ಸಂತ್ರಸ್ತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವುದು ಕಾಣುತ್ತದೆ.
ಆದರೆ, ವಿದ್ಯಾರ್ಥಿನಿ ಮುಂಚಿತವಾಗಿ ಎಚ್ಚೆತ್ತುಕೊಂಡಿದ್ದರಿಂದ ಆರೋಪಿ ಸಂತ್ರಸ್ತೆ ಮೇಲೆ ಅತ್ಯಾಚಾರ ನಡೆಯುವುದು ತಪ್ಪಿದೆ. ಆರೋಪಿ ತನ್ನ ಹುದ್ದೆ ದುರ್ಬಳಕೆ ಮಾಡಿಕೊಂಡು ಮುಗ್ಧ ಯುವತಿಯ ದೇಹವನ್ನು ಸ್ಪರ್ಶಿಸಿರುವುದು ಅತ್ಯಾಚಾರ ಮತ್ತು ಅತ್ಯಾಚಾರ ಯತ್ನ ಅರ್ಥದಲ್ಲೇ ಬರುತ್ತದೆ.
ನಂತರ ವಿಡಿಯೋ ತೋರಿಸಿ ಸಂತ್ರಸ್ತೆಯ ದೌರ್ಬಲ್ಯವನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಸಿರುವುದು ಕಾಣುತ್ತಿದೆ. ಆದ್ದರಿಂದ ಅರ್ಜಿದಾರ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುವ ಹಾಗೂ ಆತನಿಂದ ಸಿಸಿಟಿವಿ, ಮೊಬೈಲ್, ಸಂಭಾಷಣೆ ಮತ್ತಿತರೆ ಸಾಕ್ಷ್ಯಗಳನ್ನು ಜಪ್ತಿ ಮಾಡುವ ಅಗತ್ಯವಿದೆ. ಹೀಗಾಗಿ, ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಿರುವ ಆರೋಪಗಳಿಲ್ಲ ಎಂಬ ಕಾರಣಕ್ಕೆ ಗಂಭೀರ ಸ್ವರೂಪದ ಪ್ರಕರಣಲ್ಲಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.
ಪೊಲೀಸ್ ಕಸ್ಟಡಿಗೆ:
ಪ್ರಕರಣ ಸಂಬಂಧ ಸೋಮವಾರ ನ್ಯಾಯಾಲಯಕ್ಕೆ ಶರಣಾಗಿದ್ದ ಆರೋಪಿ ವಕೀಲ ಕೆ ಎಸ್ ಎನ್ ರಾಜೇಶ್ ಅವರಿಗೆ ನ್ಯಾಯಾಲಯ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಲೈಂಗಿಕ ಕಿರುಕುಳ ಪ್ರಕರಣ ದಾಖಲಾದ ಬಳಿಕ ನಾಪತ್ತೆಯಾಗಿದ್ದ ಕೆ ಎಸ್ ಎನ್ ರಾಜೇಶ್ ಸೋಮವಾರವಷ್ಟೇ ಕೋರ್ಟ್ಗೆ ಹಾಜರಾಗಿದ್ದರು. ನಿನ್ನೆ ಜಾಮೀನು ಅರ್ಜಿ ತಿರಸ್ಕರಿಸಿ ನ್ಯಾಯಾಂಗ ಕಸ್ಟಡಿಗೆ ನೀಡಲಾಗಿತ್ತು. ಇಂದು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿ ಮಂಗಳೂರು ನ್ಯಾಯಾಧೀಶರು ಆದೇಶಿಸಿದ್ದಾರೆ.
ಘಟನೆ ಹಿನ್ನೆಲೆ
ಮಂಗಳೂರಿನ ಕಾನೂನು ಕಾಲೇಜೊಂದರಲ್ಲಿ ಎಲ್ಎಲ್ಬಿ ಓದುತ್ತಿರುವ ವಿದ್ಯಾರ್ಥಿನಿ ಲೋಕಾಯುಕ್ತ ಎಸ್ಪಿಪಿ ಆಗಿರುವ ಕೆಎಸ್ಎನ್ ರಾಜೇಶ್ ಅವರ ಕಚೇರಿಯಲ್ಲಿ ಇಂಟರ್ನ್ಶಿಪ್ ಮಾಡುತ್ತಿದ್ದ ವೇಳೆ ಲೈಂಗಿಕ ಕಿರುಕುಳ ನೀಡಿದರೆಂದು ಆರೋಪಿಸಿ ದೂರು ನೀಡಿದ್ದರು. ದೂರಿನ ಮೇರೆಗೆ ಮಂಗಳೂರು ಮಹಿಳಾ ಠಾಣೆ ಪೊಲೀಸರು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376, 511, 354, 506, 384, 388, 389, 34 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.