ಬೆಂಗಳೂರು: ಮುಂಗಾರು ಸಮಯದಲ್ಲಿ ಹಾರಂಗಿ ಜಲಾಶಯವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದಿರುವುದರಿಂದಲೇ ಕೊಡಗಿನಲ್ಲಿ ಗುಡ್ಡಗಳು ಕುಸಿಯುತ್ತಿವೆ. ಹೀಗಾಗಿ ಡ್ಯಾಂ ಅನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ನಿರ್ದೇಶಿಸಬೇಕು ಎಂದು ಕೋರಿರುವ ಅರ್ಜಿ ಸಂಬಂಧ ಹೈಕೋರ್ಟ್, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಜಲಾಶಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ನಿರ್ದೇಶಿಸುವಂತೆ ಕೋರಿ ಕೊಡಗಿನ ನಂದ ಬೆಳ್ಳಿಯಪ್ಪ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲಕಾಲ ವಾದ ಆಲಿಸಿದ ಪೀಠ, ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬೃಹತ್ ಮತ್ತು ಸಣ್ಣ ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಕೊಡಗು ಜಿಲ್ಲಾಧಿಕಾರಿ ಮತ್ತು ಕೇಂದ್ರ ಜಲಶಕ್ತಿ ಸಚಿವಾಲಯ ಸೇರಿದಂತೆ ಎಲ್ಲ 12 ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದಿಸಿ, ಮಾನ್ಸೂನ್ ಅವಧಿ ಜೂನ್ನಿಂದ ಆಗಸ್ಟ್‌ವರೆಗೆ ಕೊಡಗು ಭಾಗದಲ್ಲಿ ಹೆಚ್ಚು ಮಳೆಯಾಗುತ್ತದೆ. ಹೀಗಾಗಿ ಹಾರಂಗಿ ಜಲಾಶಯಕ್ಕೆ ಅತಿ ಹೆಚ್ಚು ನೀರು ಹರಿದು ಬರುತ್ತದೆ. ಈ ಅವಧಿಯಲ್ಲಿ ಶೇ.50ರಷ್ಟು ನೀರನ್ನು ಮಾತ್ರ ಜಲಾಶಯದಲ್ಲಿ ಸಂಗ್ರಹಿಸಬೇಕು. ಆಗಸ್ಟ್ ನಂತರ ಜಲಾಶಯದಲ್ಲಿ ಗರಿಷ್ಠ ಮಟ್ಟದವರೆಗೆ ನೀರು ಸಂಗ್ರಹಿಸಬೇಕು. ಆದರೆ, ನೀರಾವರಿ ಇಲಾಖೆ ಜಲಾಶಯವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಮುಂಗಾರಿನಲ್ಲೇ ಗರಿಷ್ಠ ನೀರು ಸಂಗ್ರಹಿಸುವುದರಿಂದ ಕೊಡಗು ಭಾಗದಲ್ಲಿ ಭೂಕುಸಿತ ಮತ್ತು ಪ್ರವಾಹ ಪರಿಸ್ಥಿತಿಗಳು ಎದುರಾಗುತ್ತಿವೆ. ಈ ಹಿಂದಿನ ವರ್ಷಗಳಲ್ಲಿ ಸಂಭವಿಸಿದ ಭೂ ಕುಸಿತಗಳಿಂದಾಗಿ ಸೋಮವಾರಪೇಟೆ ಮತ್ತು ಮಡಿಕೇರಿ ಸುತ್ತಲಿನ 39 ಹಳ್ಳಿಗಳು ವಿಪರೀತ ಹಾನಿಗೆ ಒಳಗಾಗಿವೆ.
ಜಲಾಶಯದ ನೀರು ಸಂಗ್ರಹಿಸುವ ವಿಧಾನದಲ್ಲಿ ತಪ್ಪಾಗುತ್ತಿರುವುದರಿಂದಲೇ ಆಸ್ತಿ-ಪ್ರಾಣ ಹಾನಿಯಾಗುತ್ತಿದೆ. ಆದ್ದರಿಂದ ಮಾಸ್ಸೂನ್ ಅವಧಿಯಲ್ಲಿ ಹಾರಂಗಿ ಜಲಾಶಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ನಿರ್ದೇಶಿಸಬೇಕು. ಹಾರಂಗಿ ಜಲಾಯಶದ ಅಚ್ಚುಕಟ್ಟು ಪ್ರದೇಶದಲ್ಲಿ ಭೂ ಕುಸಿತ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲು ಅಂತರ್ಜಲದ ಮಟ್ಟ ಹೆಚ್ಚಳ ಹಾಗೂ ಶುದ್ಧೀಕರಣ ಬಗ್ಗೆ ವೈಜ್ಞಾನಿಕ ಅಧ್ಯಯನ ಮಾಡಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ಮನವಿ ಮಾಡಿದರು.