ಬೆಂಗಳೂರು: ನಗರದ ಥಣಿಸಂದ್ರದ ಹಜ್ ಭವನದಲ್ಲಿ ನಿರ್ಮಿಸಲಾದ 147 ಆಕ್ಸಿಜನ್ ವ್ಯವಸ್ಥೆಯುಳ್ಳ ಕೋವಿಡ್ ಆರೈಕೆ ಕೇಂದ್ರವನ್ನು ಸಚಿವ ಆರ್. ಅಶೋಕ್ ಉದ್ಘಾಟನೆ ಮಾಡಿದರು.
ಕಳೆದ ಬಾರಿ ಕೋವಿಡ್ ಕೇರ್ ಸೆಂಟರ್ ಆಗಿದ್ದ ಹಜ್ ಭವನ ಇದೀಗ ಆಕ್ಸಿಜನ್ ಸೆಂಟರ್ ಆಗಿದೆ. ನಾಳೆಯಿಂದಲೇ ಇದು ಕಾರ್ಯಾರಂಭ ಮಾಡಲಿದೆ. ಅಧಿಕಾರಿಗಳು ಕಳೆದ ಹತ್ತು ದಿನಗಳಿಂದ ಆಕ್ಸಿಜನ್ ಸೆಂಟರ್‌ಗಾಗಿ ಶ್ರಮ ವಹಿಸಿದ್ದಾರೆ. ಹಜ್ ಭವನದಲ್ಲಿ ಚಿಕಿತ್ಸೆಗಾಗಿ 8 ವೈದ್ಯರು, 12 ದಾದಿಯರು, 12 ಹೌಸ್ ಕೀಪಿಂಗ್ ಸಿಬ್ಬಂದಿ, ಡಾಟಾ ಎಂಟ್ರಿ ಆಪರೇಟರ್ಗಳನ್ನು ನಿಯೋಜಿಸಲಾಗಿದೆ. ಈ ಭಾಗದ ಜನರಿಗೆ ಅನುಕೂಲವಾಗುವಂತೆ ನೂರು ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಿದ್ದೇವೆ ಎಂದು ಸಚಿವ ಆರ್. ಅಶೋಕ್ ಹೇಳಿದರು.
ರೋಗ ಗುಣಲಕ್ಷಣಗಳುಳ್ಳ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುವುದು. ಇಲ್ಲಿ 24 ಗಂಟೆ ಕಾಲವೂ ಅಂಬ್ಯುಲೆನ್ಸ್ ಸೌಲಭ್ಯ ಇರಲಿದೆ. ಸೋಂಕಿತರಿಗೆ ಬೆಳಗ್ಗೆ ಉಪಹಾರ, ಹಣ್ಣು, ಸೂಪ್, ಮಧ್ಯಾಹ್ನದ ಊಟ, ಸಂಜೆ ಚಹಾ ಮತ್ತು ಬಿಸ್ಕತ್ತು, ರಾತ್ರಿ ಊಟ ಮತ್ತು ಹಾಲು ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಕಂದಾಯ ಸಚಿವರು ತಿಳಿಸಿದರು.
ಆಕ್ಸಿಜನ್ ಕೊರತೆಯಿಂದ ಅಂಬ್ಯುಲೆನ್ಸ್ಗಳಲ್ಲಿ ಮತ್ತು ಮನೆಯಲ್ಲಿ ಕಾಯುವುದು ನಿಲ್ಲಬೇಕು. ಅದಕ್ಕಾಗಿ ಈ ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ. ಐಸಿಯು ಆನ್ ವೀಲ್ಸ್ ವ್ಯವಸ್ಥೆಯಡಿ ಬಸ್ಗಳಲ್ಲಿ ಆಕ್ಸಿಜನ್ ಕೊಡುತ್ತಿದ್ದೇವೆ. ಇನ್ನೂ ಎರಡ್ಮೂರು ದಿನದಲ್ಲಿ ಆಕ್ಸಿಜನ್ ಬೆಡ್ ಕೊರತೆ ಇರಲಾರದಂತೆ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದರು.
ಲಾಕ್ಡೌನ್ ಮುಂದುವರಿಕೆ ತಜ್ಞರ ಅಭಿಪ್ರಾಯ
24 ರವರೆಗೆ ಲಾಕ್ ಡೌನ್ ಇರುತ್ತದೆ. ನಂತರ ಸಭೆ ಮಾಡಿ ಚರ್ಚೆ ಮಾಡಲಾಗುತ್ತದೆ. ತಜ್ಞರ ಅಭಿಪ್ರಾಯ ಕೂಡಾ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಡಿಎ ಅಧ್ಯಕ್ಷರಾದ ಎಸ್.ಆರ್. ವಿಶ್ವನಾಥ್, ಬ್ಯಾಟರಾಯನಪುರ ಶಾಸಕ ಕೃಷ್ಣ ಭೈರೇಗೌಡ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹಾಗೂ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಭಾಗಿಯಾಗಿದ್ದರು.