ಬೆಂಗಳೂರು: ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಇದರಿಂದ ಅದೆಷ್ಟೋ ಜನರು ಕೆಲಸವಿಲ್ಲದೆ ಮನೆಯಲ್ಲಿಯೇ ಕೂರುವಂತಾಗಿದೆ. ಕ್ಷೌರಿಕರು ಕೂಡ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಸವಿತಾ ಸಮಾಜದ ಜನ ತಲೆತಲಾಂತರದಿಂದ ಕ್ಷೌರಿಕ ಹಾಗೂ ವಾದ್ಯ ಬಾರಿಸುವ ವೃತ್ತಿ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಕೊರೊನಾ ಲಾಕ್ ಡೌನ್ ನಿಂದ ಮದುವೆಗಳು ಕೂಡ ನಡೆಯುತ್ತಿಲ್ಲ, ಅಲ್ಲದೆ ನಮ್ಮ ಅಂಗಡಿಗಳನ್ನೂ ಕೂಡ ಬಂದ್ ಮಾಡಲಾಗಿದೆ. ಇದರಿಂದ ನಮ್ಮ ಜೀವನ ನಿರ್ವಹಣೆ ತುಂಬಾ ಕಷ್ಟವಾಗಿದೆ ಎಂದು ಸವಿತಾ ಸಮಾಜದ ರಾಜ್ಯ ಕಾರ್ಯದರ್ಶಿ ಬೈಲಪ್ಪ ನಾರಾಯಣ್ ತಮ್ಮ ಸಮಾಜದ ಸಂಕಷ್ಟವನ್ನು ಈಟಿವಿ ಭಾರತ ಎದುರು ತೋಡಿಕೊಂಡಿದ್ದಾರೆ.
ಕೊರೊನಾ ಎಫೆಕ್ಟ್ನಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹುಮುಖ್ಯವಾಗಿದೆ. ಅದ್ದರಿಂದ ಜನರು ಕಟಿಂಗ್ ಮಾಡಿಸಿಕೊಳ್ಳಲು ಅಂಗಡಿಗೆ ಬಂದ್ರೂ ಸಹ ಅವರಿಗೆ ಕಟಿಂಗ್ ಮಾಡಲು ನಮಗೆ ಭಯವಾಗುತ್ತಿದೆ. ಒಂದು ವೇಳೆ ಸೋಂಕಿತರು ಬಂದು ಕಟಿಂಗ್, ಶೇವಿಂಗ್ ಮಾಡಿಸಿಕೊಂಡ್ರೆ ಅವರಿಂದ ನಮಗೂ ಕೂಡ ಸೋಂಕು ಸುಲಭವಾಗಿ ಹರಡುತ್ತದೆ. ಅದ್ದರಿಂದ ಲಾಕ್ ಡೌನ್ ಮುಗಿದ ನಂತ್ರ ವೈದ್ಯರಿಗೆ ಕೊಡುವ ಪಿಪಿಇ ಕಿಟ್ ಹಾಗೂ ಸ್ಯಾನಿಟೈಸರ್, ಮಾಸ್ಕ್ ಹಾಗೂ ಗ್ಲೌಸ್ಗಳನ್ನು ನಮ್ಮ ಕ್ಷೌರಿಕರಿಗೂ ಸಹ ಕೊಡಬೇಕು ಎಂದು ಬೈಲಪ್ಪ ನಾರಾಯಣ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇನ್ನು, ಬೆಂಗಳೂರಿನಲ್ಲಿ ಕ್ಷೌರಿಕ ವೃತ್ತಿಯನ್ನು ನಂಬಿಕೊಂಡು ಸುಮಾರು 60 ಸಾವಿರ ಜನರಿದ್ದಾರೆ. ಸದ್ಯಕ್ಕೆ ಇವರ ಬದುಕು ದುಸ್ತರವಾಗಿದೆ. ಈಗಾಗಲೇ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಮನವಿ ಮಾಡಿದ್ದರೂ ಕೂಡ ಯಾರು ನಮ್ಮ ಸಮಾಜದ ನೆರವಿಗೆ ಬಂದಿಲ್ಲ. ಅಲ್ಲದೆ ನಮ್ಮ ಸಮಾಜದ ಬಹುತೇಕರು ಬಾಡಿಗೆ ಮನೆಯಲ್ಲೇ ವಾಸಿಸುತ್ತಿದ್ದೇವೆ. ಆದ್ದರಿಂದ ಸರ್ಕಾರ ಕೂಡಲೇ ಕ್ಷೌರಿಕರ ಪ್ರತಿ ಕುಟುಂಬಕ್ಕೆ 10 ಸಾವಿರ ನೆರವು ನೀಡಬೇಕೆಂದು ಸರ್ಕಾರಕ್ಕೆ ಬೈಲಪ್ಪ ಒತ್ತಾಯಿಸಿದ್ದಾರೆ.