ಬೆಂಗಳೂರು: ಅನರ್ಹರ ಶಾಸಕರನ್ನು ಕಾಂಗ್ರೆಸ್ ಪಕ್ಷ ಬೆಳೆಸಿತ್ತು. ಅವರೂ ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದರು. ಆದರೀಗ ಬಿಜೆಪಿಯವರು ಅವರ ಭವಿಷ್ಯವನ್ನು ಏನು ಮಾಡಿದರು ನೋಡಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನ.11 ಕ್ಕೆ ಚುನಾವಣಾ ಅಧಿಸೂಚನೆ ಹೊರಬೀಳಲಿದೆ. ನನ್ನ ಪ್ರಕಾರ ಈ ಸಂದರ್ಭದಲ್ಲಿ ಚುನಾವಣೆ ಮುಂದೂಡಿಕೆ ಸಾಧ್ಯವಿಲ್ಲ. ನ.13 ರಂದು ಕೋರ್ಟ್ ತೀರ್ಪು ಪ್ರಕಟಿಸಬಹುದು. ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಿಗೆ ಅವಕಾಶ ಸಿಗುವುದೇ ಅನುಮಾನ ಎಂದರು.
ನಾಳೆ ಕಾನೂನಿನಲ್ಲಿ ಪರಿಣಿತರಾದ ನಾಯಕರ ಸಭೆ ಕರೆದಿದ್ದೇವೆ. ಕಪಿಲ್ ಸಿಬಲ್ ಕೂಡ ನಾಳೆ ರಾಜ್ಯಕ್ಕೆ ಬರುತ್ತಿದ್ದಾರೆ, ಸುದ್ದಿಗೋಷ್ಠಿ ನಡೆಸಲಿದ್ದಾರೆ. ಎಲ್ಲರ ಅಭಿಪ್ರಾಯ ಪಡೆದು ಮುಂದುವರಿಯುತ್ತೇವೆ ಎಂದು ವಿವರಿಸಿದರು.
ಅನರ್ಹರ ಕ್ಷೇತ್ರಗಳಿಗೆ ಹೆಚ್ಚು ಅನುದಾನ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷದ ಶಾಸಕರ ಅನುದಾನ ಕಡಿತ ಮಾಡಲಾಗಿದೆ. ನಗರೋತ್ಥಾನ ಯೋಜನೆಯಲ್ಲಿ ತಾರತಮ್ಯ ಎಸೆಗಲಾಗಿದೆ. ಕಾಂಗ್ರೆಸ್ ಅವಧಿಯ ಕೆಲಸಗಳು ರದ್ದು ಮಾಡುವುದು, ಅನರ್ಹರ ಕ್ಷೇತ್ರಗಳಿಗೆ ನೆರವು ನೀಡುವುದು, ಇವೆಲ್ಲವೂ ದ್ವೇಷದ ರಾಜಕಾರಣವಲ್ಲವೇ? ಯಡಿಯೂರಪ್ಪ ದ್ವೇಷ ಸಾಧನೆ ಮಾಡಲ್ಲ ಅಂದಿದ್ದರು. ಆದರೆ ಈಗ ಮಾಡುತ್ತಿರುವುದು ಏನು? ಅವರಿಗೆ ಅಧಿಕಾರದ ದಾಹ ಅಷ್ಟೇ ಇದೆ. ಚುನಾವಣೆ ಗೆಲ್ಲುವುದು, ಅಧಿಕಾರದಲ್ಲಿ ಇರುವುದು, ಇವಿಷ್ಟೇ ಬಿಜೆಪಿಯವರ ಸಿದ್ಧಾಂತ ಎಂದು ಕಿಡಿ ಕಾರಿದರು.
ನೆರೆ ಸಂತ್ರಸ್ಥರ ಬಗ್ಗೆ ಕಾಳಜಿಯಿಲ್ಲ. ಅಧಿಕಾರ, ಹಣ ಮಾಡುವುದೇ ಅವರ ಉದ್ದೇಶ. ಇಂಥ ದುರ್ಗತಿ ರಾಜ್ಯಕ್ಕೆ ಎಂದೂ ಬಂದಿರಲಿಲ್ಲ. ಸಿಎಂ ಕಂಡರೆ ಬಿಜೆಪಿಯವರಿಗೇ ಆಗಲ್ಲ. ಕೇಂದ್ರದ ನಾಯಕರಿಗೂ ಯಡಿಯೂರಪ್ಪ ಮೇಲೆ ವಿಶ್ವಾಸವಿಲ್ಲ. ಅನರ್ಹರ ಪರ ಓಲೈಕೆ ಬಿಟ್ಟರೆ ಸಿಎಂಗೆ ಬೇರೆ ದಾರಿಯಿಲ್ಲ. ಅವರ ಶಾಸಕರ ಅಸಮಾಧಾನ ಮಾಡುವುದಕ್ಕೂ ಆಗುತ್ತಿಲ್ಲ. ಇವರನ್ನು ಕಂಡರೆ ಅಮಿತ್ ಶಾಗೂ ಆಗಲ್ಲ. ರಾಜ್ಯಾಧ್ಯಕ್ಷರೂ ಪ್ರತ್ಯೇಕ ತಂಡ ಕಟ್ಟಿಕೊಂಡಿದ್ದಾರೆ. ಇದನ್ನು ನೋಡಿದರೆ ಮಧ್ಯಂತರ ಚುನಾವಣೆ ನಡೆಯಲಿದೆ ಎಂದೆನಿಸುತ್ತೆ ಎಂದು ಭವಿಷ್ಯ ನುಡಿದರು.