ಬೆಂಗಳೂರು: ಜಯಕರ್ನಾಟಕ ಜನಪರ ವೇದಿಕೆಯ ಗುಣರಂಜನ್ ಶೆಟ್ಟಿ ಕೊಲೆಗೆ ಸಂಚು ರೂಪಿಸಿದ್ದಾರೆ ಎಂಬ ವದಂತಿ ಹರಿದಾಡುತ್ತಿದ್ದು, ಗುಣರಂಜನ್ ಶೆಟ್ಟಿ ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಹಿರಿಯ ಪೊಲೀಸರ ಮಾಹಿತಿ ಪ್ರಕಾರ, ಜೈಲಿನಲ್ಲಿ ಗುಣರಂಜನ್ ಶೆಟ್ಟಿ ಹತ್ಯೆಗೆ ಸಂಚು ರೂಪಿಸಲಾಗಿದೆ.
ಮುತ್ತಪ್ಪ ರೈ ಸಂಬಂಧಿ ಮನ್ಮಿತ್ ರೈನಿಂದ ಕೊಲೆಗೆ ಸ್ಕೆಚ್ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಮನ್ವಿತ್ ರೈ ವಿದೇಶದಲ್ಲಿರುವ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ವದಂತಿ ಹಿನ್ನೆಲೆಯಲ್ಲಿ ಬಂಟ್ವಾಳದ ಮುತ್ತಪ್ಪ ರೈ ಆಪ್ತ ರಾಕೇಶ್ ಮಲ್ಲಿಯನ್ನು ಮಂಗಳೂರು ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದಾರೆ. ರಾಕೇಶ್ ಮಲ್ಲಿ ಹಾಗೂ ಮನ್ವಿತ್ ಆಪ್ತರಾಗಿದ್ದು, ಇದೇ ವಿಚಾರಕ್ಕೆ ಪೊಲೀಸರು ಕರೆಸಿ ತನಿಖೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ ಶೆಟ್ಟಿ: ಮುತ್ತಪ್ಪ ರೈ ಬದುಕಿದ್ದಾಗ ಒಟ್ಟಿಗಿದ್ದ ರಾಕೇಶ್ ಮಲ್ಲಿ, ಮನ್ವಿತ್ ಹಾಗೂ ಗುಣರಂಜನ್ ಶೆಟ್ಟಿ ರೈ ಸಾವಿನ ನಂತರ ದೂರವಾಗಿದ್ದರು. ಗುಣರಂಜನ್ ಶೆಟ್ಟಿ ಜಯಕರ್ನಾಟಕ ಸಂಘಟನೆಯಿಂದ ಹೊರಬಂದು ಜಯಕರ್ನಾಟಕ ಜನಪರ ವೇದಿಕೆ ಸ್ಥಾಪಿಸಿದ್ದರು. ಅಷ್ಟೇ ಅಲ್ಲದೇ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರನಾಗಿರುವ ಗುಣರಂಜನ ಶೆಟ್ಟಿ ಮಂಗಳೂರು ಮತ್ತು ಬೆಂಗಳೂರು ಭಾಗದಲ್ಲಿ ಹೆಸರು ಮಾಡಿದ್ದಾರೆ. ಜೊತೆಗೆ ರೈ ಆಪ್ತವಲಯದಲ್ಲಿ ಗುರುಸಿಕೊಂಡಿದ್ದರು. ಈ ಕಾರಣಕ್ಕೆ ಗುಣರಂಜನ್ ಶೆಟ್ಟಿ ಕೊಲೆ ಮಾಡಿದರೆ ದೊಡ್ಡ ಮಟ್ಟದ ಹೆಸರು ಮಾಡಬಹುದೆಂದು ಈ ಕೊಲೆಗೆ ಸ್ಕೆಚ್ ಹಾಕಲಾಗಿದೆ ಎನ್ನಲಾಗ್ತಿದೆ.
ಗುಣರಂಜನ್ ಶೆಟ್ಟಿ ಕೊಲೆಗೆ ಸಂಚು ವಿಚಾರವಾಗಿ ಇಂದು ಗೃಹಮಂತ್ರಿಗಳಿಗೆ ಸಂಘಟನೆ ವತಿಯಿಂದ ಮನವಿ ಸಲ್ಲಿಸಿದ್ದು, ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಮಾಡುವಂತೆ ಕೇಳಿಕೊಂಡಿದ್ದಾರೆ. ತಮ್ಮ ಮೇಲಿನ ಬಂದಿರುವ ಆರೋಪ ಬಗ್ಗೆ ಸ್ಪಷ್ಟನೆ ನೀಡಿರುವ ಮನ್ವೀತ್ ರೈ, ಈ ಆರೋಪ ಯಾಕೆ ಬಂತು ಎಂಬುದೇ ಗೊತ್ತಾಗುತ್ತಿಲ್ಲ. ಕೆಲಸ ನಿಮಿತ್ತ ವಿದೇಶದಲ್ಲಿದ್ದೇನೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ನನ್ನ ಹೆಸರಿದೆ ಎಂದು ಸುದ್ದಿಯಾಗಿದೆ.
ನಾನು ಯಾರಿಗೂ ಬೆದರಿಕೆ ಹಾಕಿಲ್ಲ. ಅಲ್ಲದೇ ಈ ಬಗ್ಗೆ ಯಾರೂ ಸಹ ದೂರು ನೀಡಿಲ್ಲ. ನನ್ನ ಮೇಲೆ ಇದುವರೆಗೂ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. ಯಾವ ಠಾಣೆಯಲ್ಲಿಯೂ ಎಫ್ಐಆರ್ ದಾಖಲಾಗಿಲ್ಲ. ಏನೂ ಇಲ್ಲದೇ, ಮನ್ಮಿತ್ ರೈಯಿಂದ ಸಂಚು ನಡೆಯುತ್ತಿದೆ ಎಂದು ಹೇಗೆ ಹೇಳುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ ಎಂದು ತಿಳಿಸಿದ್ದಾರೆ.