ಬೆಂಗಳೂರು: ಕೊಡವರಿಗೆ ಬಂದೂಕು ಪರವಾನಗಿಯಿಂದ ವಿನಾಯಿತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಈ ಕುರಿತು ನಿವೃತ್ತ ಕ್ಯಾ.ವೈ.ಕೆ.ಚೇತನ್ ಸಲ್ಲಿಸಿದ್ದ ಪಿಐಎಲ್ ಕುರಿತು ಹಂಗಾಮಿ ಸಿಜೆ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲೆ ಬಿ.ವಿ.ವಿದ್ಯುಲ್ಲತ ವಾದ ಮಂಡಿಸಿ, ಕೊಡವರು ಮತ್ತು ಜಮ್ಮಾಬಾಣೆ ಭೂಮಿ ಹೊಂದಿರುವವರಿಗೆ ಬಂದೂಕು ಹೊಂದುವುದಕ್ಕೆ ಪರವಾನಿಗೆಯಿಂದ ವಿನಾಯಿತಿ ನೀಡಲಾಗಿದೆ. ಆದಕ್ಕೆ ಯಾವುದೇ ಮಾನದಂಡ ನಿಗದಿಪಡಿಸಿಲ್ಲ. ಚುನಾವಣೆ ಸಮಯದಲ್ಲಿ ಲೈಸನ್ಸ್ ಹೊಂದಿರುವ ಎಲ್ಲರೂ ಶಸ್ತ್ರಾಸ್ತ್ರ ಒಪ್ಪಿಸಬೇಕು, ಅದಕ್ಕೂ ವಿನಾಯಿತಿ ನೀಡಲಾಗಿದೆ. ಜೊತೆಗೆ ಕೊಡಗಿನಲ್ಲೇ ಇರುವ ಇತರೆ ಜನಾಂಗ, ಬುಡ್ಡಕಟ್ಟು ವಾಸಿಗಳಿಗೆ ಈ ವಿನಾಯ್ತಿ ಇಲ್ಲದಿರುವುದು ತಾರತಮ್ಯದಿಂದ ಕೂಡಿದೆ ಎಂದರು.
ಕೇಂದ್ರದ ಪರ ವಾದಿಸಿದ ಎಎಸ್ಜಿ ಎಂ.ಬಿ.ನರಗುಂದ್, ಕೊಡವರಿಗೆ ಬಂದೂಕು ಲೈಸನ್ಸ್ ವಿನಾಯಿತಿ ನೀಡಿರುವುದರಿಂದ ಅರ್ಜಿದಾರರ ಮೂಲಭೂತ ಹಕ್ಕಿಗೆ ತೊಂದರೆ ಇಲ್ಲ. ಕೊಡವರು ವಿಶೇಷ ಬುಡಕಟ್ಟು ಜನಾಂಗ, ಅವರಲ್ಲಿ ಜಾತಿಗಳಿಲ್ಲ, ಪುರೋಹಿತಶಾಹಿ ಇಲ್ಲ. ಅವರು ಕಾವೇರಿ ಮಾತೆ ಮತ್ತು ಶಸ್ತ್ರಾಸ್ತ್ರಗಳನ್ನು ಮಾತ್ರ ಪೂಜಿಸುತ್ತಾರೆ. ಎಲ್ಲ ಬಗೆಯ ಬಂದೂಕಿಗೂ ವಿನಾಯಿತಿ ನೀಡಿಲ್ಲ, ಕೇವಲ ಒಂದು ಬಗೆಯ ರೈಫಲ್ಗೆ ಮಾತ್ರ ಲೈಸನ್ಸ್ ವಿನಾಯ್ತಿ ಇದೆ. ಸಿಖ್ಗೆ ಕೃಪಾಣ್ ಹೊಂದಲು, ಗುರ್ಖಾ ಜನಾಂಗಕ್ಕೆ ಕುಕರಿ ಹೊಂದಲು ಅವಕಾಶ ನೀಡಿರುವಂತೆ ಕೊಡವರಿಗೂ ವಿನಾಯಿತಿ ನೀಡಲಾಗಿದೆ ಎಂದು ಸಮರ್ಥಿಸಿಕೊಂಡರು. ವಾದ ಪ್ರತಿವಾದ ಆಲಿಸಿದ ಪೀಠ, ತೀರ್ಪು ಕಾಯ್ದಿರಿಸಿತು.