ಬೆಂಗಳೂರು: ಚಿಟ್ ಫಂಡ್ ಮೇಲೆ ಜಿಎಸ್ಟಿ ಹೆಚ್ಚಳ ವಿರೋಧಿಸಿ ಇಲ್ಲಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯದ ಎಲ್ಲ ಚಿಟ್ ಫಂಡ್ ಸಂಸ್ಥೆಯ ಮಾಲೀಕರು, ಸದಸ್ಯರು, ಸಿಬ್ಬಂದಿ ಪ್ರತಿಭಟನೆ ನಡೆಸಿದರು. ಚಿಟ್ ಫಂಡ್ ಮೇಲಿನ ಜಿಎಸ್ಟಿಯನ್ನು ಸಂಪೂರ್ಣವಾಗಿ ತೆಗೆಯಬೇಕು ಅಥವಾ ಕನಿಷ್ಠ ಶೇ.5 ಕಡಿಮೆ ಮಾಡಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಚಿಟ್ ಫಂಡ್ ಒಂದು ವಿಶಿಷ್ಟ ಆರ್ಥಿಕ ಸಾಧನ: ಚಿಟ್ ಫಂಡ್ ಒಂದು ವಿಶಿಷ್ಟವಾದ ಆರ್ಥಿಕ ಸಾಧನವಾಗಿದೆ. ಅದು ಉಳಿತಾಯದ ಪ್ರವೃತ್ತಿ ಮತ್ತು ಸಾಲ ತೆಗೆದುಕೊಳ್ಳುವುದನ್ನು ಒಟ್ಟುಗೂಡಿಸುತ್ತದೆ. ಬ್ಯಾಂಕಿಂಗ್ ಸೌಲಭ್ಯಕ್ಕೆ ಅವಕಾಶ ಇಲ್ಲದ ಮಧ್ಯಮ ಮತ್ತು ಕಡಿಮೆ ಆದಾಯದ ಜನರಿಗೆ ಅವರ ಆರ್ಥಿಕ ಅವಶ್ಯಕತೆಗಳನ್ನು ಪೂರೈಸುತ್ತದೆ. ನಾವು, ಬ್ಯಾಂಕ್ ಸೇವೆಗಳ ಸೌಲಭ್ಯವಿಲ್ಲದವರಿಗೆ ಮತ್ತು ಕಡಿಮೆ ಬ್ಯಾಂಕ್ ಸೌಲಭ್ಯಗಳನ್ನು ಹೊಂದಿರುವವರಿಗೆ ಸೇವೆ ಸಲ್ಲಿಸುತ್ತೇವೆ. ಎಲ್ಲವನ್ನೂ ಒಳಗೊಳ್ಳುವ ರಾಷ್ಟ್ರೀಯ ಆರ್ಥಿಕ ಕಾರ್ಯಕ್ರಮವನ್ನು ಸುಗಮವಾಗಿಸುತ್ತೇವೆ. ಹೀಗೆ ವಿದ್ಯುಕ್ತ ಮತ್ತು ಅನೌಪಚಾರಿಕ ಆರ್ಥಿಕ ಮಧ್ಯವರ್ತಿಗಳ ನಡುವೆ ಇರುವ ದೊಡ್ಡ ಹಣದ ಬೇಡಿಕೆ ಮತ್ತು ಪೂರೈಕೆಯ ಅಂತರವನ್ನು ನಾವು ಕಡಿಮೆ ಮಾಡುತ್ತೇವೆ ಎಂದು ಮಾರ್ಗದರ್ಶಿ ಚಿಟ್ ಫಂಡ್ ಸಂಸ್ಥೆಯ ಬಸವೇಶ್ವರ ನಗರದ ಸಹಾಯಕ ವ್ಯವಸ್ಥಾಪಕ ತ್ರಿವಿಕ್ರಮ್ ರಾವ್ ತಿಳಿಸಿದರು.
ಜಿಎಸ್ಟಿ ಹೆಚ್ಚಳದಿಂದ ಅನೇಕ ತೊಂದರೆಗಳಾಗುತ್ತಿದ್ದು, ಗ್ರಾಹಕರು ಕೂಡ ಇದರಿಂದ ಬೇಸತ್ತು ಅಧಿಕೃತ ಚಿಟ್ ಫಂಡ್ ಸಂಸ್ಥೆಗಳಲ್ಲಿ ಹಣ ಹೂಡಲು ಹಿಂಜರಿಯುತ್ತಿದ್ದಾರೆ. ಚಿಟ್ ಫಂಡ್ ಮೇಲೆ ಶೇ.12ರಷ್ಟಿದ್ದ ಜಿಎಸ್ಟಿ ಅನ್ನು ಶೇ.18 ಕ್ಕೆ ಹೆಚ್ಚಿಸಿದ್ದಾರೆ. ನಮ್ಮ ರಾಜ್ಯದಲ್ಲಿಯೇ 10 ಸಾವಿರ ಕ್ಕೂ ಹೆಚ್ಚು ಮಂದಿ ಇದರಲ್ಲಿ ಕೆಲಸ ನಂಬಿಕೊಂಡಿದ್ದು, ಅವರೆಲ್ಲರಿಗೂ ತೊಂದರೆಯಾಗಲಿದೆ. ರಾಜ್ಯದಲ್ಲಿ 1700 ನೋಂದಣಿಯಾದ ಕಂಪನಿಗಳಿವೆ. ವರ್ಷಕ್ಕೆ 9 ಸಾವಿರ ಕೋಟಿ ರೂ. ವ್ಯವಹಾರ ಆಗುತ್ತಿದೆ ಎಂದು ಕರ್ನಾಟಕ ಚಿಟ್ ಸ್ಟರ್ ಅಸೋಸಿಯೇಷನ್ ಅಧ್ಯಕ್ಷ ಎಸ್. ಬಸವಲಿಂಗಪ್ಪ ಹೇಳಿದರು.
ಚಿಟ್ ಫಂಡ್ ಸಂಸ್ಥೆಗಳಿಗೆ ಸಾವಿನ ಗಂಟೆ: ನಾವು ಮುಂಚೆಯೂ ಬ್ಯಾಂಕ್, ಮ್ಯೂಚುವಲ್ ಫಂಡ್ಸ್ ಮತ್ತು ಎನ್.ಬಿ.ಎಫ್.ಸಿ ತರಹದ ಆರ್ಥಿಕ ಸಂಸ್ಥೆಗಳು ಒದಗಿಸುವ ಸೇವೆಗಳ ರೀತಿಯೇ ಚಿಟ್ ಫಂಡ್ ಸೇವೆಗಳನ್ನು ಜಿಎಸ್ಟಿ ತೆರಿಗೆಯಿಂದ ಮುಕ್ತಗೊಳಿಸಿ ಎಂದು ಸರ್ಕಾರವನ್ನು ಕೇಳುತ್ತಲೇ ಬಂದಿದ್ದೇವೆ. ಆದರೂ ಚಿಟ್ ಫಂಡ್ಗಳನ್ನು ಆರ್.ಬಿ.ಐನಿಂದ ಎನ್.ಬಿ.ಎಫ್.ಸಿ ಎಂದೇ ವರ್ಗೀಕರಿಸಿದ್ದರೂ, ಜಿ.ಎಸ್.ಟಿ ತೆರಿಗೆ ಪಾವತಿಸಲು ಚಿಟ್ ಫಂಡ್ಅನ್ನು ಪ್ರತ್ಯೇಕಗೊಳಿಸಲಾಗಿದೆ. ಈ ಸಂಸ್ಥೆಗಳಿಗೆ ಇದು ಸಾವಿನ ಗಂಟೆ ಬಾರಿಸಿದಂತಾಗಿದೆ ಎಂದು ಚಿಟ್ ಸ್ಟರ್ ಅಸೋಸಿಯೇಷನ್ ಕಾರ್ಯದರ್ಶಿ ಗೋವಿಂದ್ ಆತಂಕ ವ್ಯಕ್ತಪಡಿಸಿದರು.
ಚಿಟ್ ಫಂಡ್ ನೈಜ ಪ್ರಯೋಜನ ವಿಫಲ: ಹಣ ಹೂಡುವ ನಾಗರಿಕರ ಮೇಲೆ ಪ್ರಧಾನವಾಗಿ ಜಿ.ಎಸ್.ಟಿ ಹೊರೆ ಬೀಳುವುದರಿಂದ ಉಳಿತಾಯದ ಮೇಲೆ ಹಿಂಪಡೆಯುವ ಹಣವು ಗಂಭೀರವಾಗಿ ಕಡಿಮೆಯಾಗುತ್ತದೆ. ಮತ್ತು ಸಾಲ ಪಡೆಯುವುದರ ವೆಚ್ಚವು ಹೆಚ್ಚುತ್ತದೆ. ಇದರಿಂದಾಗಿ ಚಿಟ್ ಫಂಡ್ ಸೇರುವ ನೈಜ ಪ್ರಯೋಜನವೇ ವಿಫಲವಾಗುತ್ತದೆ ಎಂದು ಅವರು ವಿವರಿಸಿದರು.
ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ರಿಜಿಸ್ಟರ್ಡ್ ಚಿಟ್ ಫಂಡ್ ಸಂಸ್ಥೆಯ ಮಾಲೀಕರು, ಪದಾಧಿಕಾರಿಗಳು, ಅಧಿಕಾರಿಗಳು, ನೌಕರರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.