ಹೊಸಕೋಟೆ(ಬೆಂಗಳೂರು ಗ್ರಾಮಾಂತರ): ಜಮೀನು ವಿಚಾರಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿರುವ ಪ್ರಕರಣ ಹೊಸಕೋಟೆ ತಾಲೂಕಿನ ದೊಡ್ಡಗಟ್ಟಿಗನಹಬ್ಬೆ ಗ್ರಾಮದಲ್ಲಿ ನಡೆದಿದೆ. ಈ ವೇಳೆ ಬಿಜೆಪಿ ಮುಖಂಡ ಗಾಳಿಯಲ್ಲಿ ಗುಂಡು ಹಾರಿಸಿ, ದರ್ಪ ತೋರಿರುವ ಆರೋಪ ಕೇಳಿಬಂದಿದೆ.
ಗ್ರಾಮದ ಜಮೀನಿನಲ್ಲಿ ಗೋದಾಮು ನಿರ್ಮಾಣ ಸಂಬಂಧ ಖಾಸಗಿ ಜಮೀನಿಗೆ ಕಲ್ಲು ಹಾಕುವ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಸಚಿವ ಎಂಟಿಬಿ ನಾಗರಾಜ್ ಆಪ್ತ ಹಾಗು ಬಿಜೆಪಿ ಮುಖಂಡ ಜನಾರ್ಧನ್ ಅವರು ಹೊಸಕೋಟೆಯ ಕಾಂಗ್ರೆಸ್ ಮುಖಂಡ ಸುನೀಲ್ ಅವರನ್ನ ಬೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿ, ದರ್ಪ ಮೆರೆದಿದ್ದಾರೆ ಎನ್ನಲಾಗ್ತಿದೆ.
ದೊಡ್ಡಗಟ್ಟಿಗನಹಬ್ಬೆ ಗ್ರಾಮದಲ್ಲಿ ಖಾಸಗಿ ಜಮೀನಿಗೆ ಕಲ್ಲು ಹಾಕುವ ವಿಚಾರವಾಗಿ ಕಾಂಗ್ರೆಸ್ ಮುಖಂಡ ಸುನೀಲ್ ಮತ್ತು ಬಿಜೆಪಿ ಮುಖಂಡ ಜನಾರ್ಧನ್ ನಡುವೆ ಗಲಾಟೆ ಆರಂಭವಾಗಿ ಜನಾರ್ಧನ್ 2 ಸಲ ಗಾಳಿಯಲ್ಲಿ, 4 ಸಲ ಭೂಮಿಗೆ ಗುಂಡು ಹಾರಿಸಿದ್ದಾರಂತೆ. 6 ಸಲ ಫೈರಿಂಗ್ ಮಾಡಿದರೂ ಅದೃಷ್ಟವಶಾತ್ ಸಾವು-ನೋವು ಸಂಭವಿಸಿಲ್ಲ. ಕೆಲವರ ಮೇಲೆ ಹಲ್ಲೆ ಮಾಡಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮೀಣ ಎಸ್ಪಿ ವಂಶಿಕೃಷ್ಣ, ಹೆಚ್ಚುವರಿ ಎಎಸ್ಪಿ ಪುರುಷೋತ್ತಮ್, ಡಿವೈಎಸ್ಪಿ ಉಮಾಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಫೈರ್ ಮಾಡಿದ ಗುಂಡುಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಂಗ್ರೆಸ್ ಮುಖಂಡನ ಮೇಲೆ ಗುಂಡು ಹಾರಿಸಲು ಯತ್ನಿಸಿದ ಹಿನ್ನೆಲೆ ಸ್ಥಳಕ್ಕೆ ಶಾಸಕ ಶರತ್ ಬಚ್ಚೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಗೌಂಡವಾಡ ಘರ್ಷಣೆ: ಸತೀಶ್ ಪಾಟೀಲ್ ಕೊಲೆ ಮಾಡಿದ 10 ಆರೋಪಿಗಳ ಬಂಧನ