ಬೆಂಗಳೂರು: ರಾಜ್ಯದ ಸರ್ಕಾರಿ ಶಾಲಾ ಮಕ್ಕಳ ಅಪೌಷ್ಠಿಕತೆ ನಿವಾರಣೆಗಾಗಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ಹಾಗೂ ಬಾಳೆಹಣ್ಣು ನೀಡುವುದಾಗಿ ಆದೇಶಿಸಿತ್ತು. ಈ ಮಧ್ಯೆ ಮೊಟ್ಟೆ ವಿತರಣೆಗೆ ವಿರೋಧ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಬಾಳೆ ಹಣ್ಣಿನಲ್ಲಿ ಮೊಟ್ಟೆಯಷ್ಟು ಪೌಷ್ಠಿಕಾಂಶ ಇಲ್ಲ ಎಂಬ ಕಾರಣಕ್ಕೆ ಶೇಂಗಾ ಚಿಕ್ಕಿ ನೀಡಲು ಚಿಂತನೆ ನಡೆಸಿದೆ.
ಆದರೆ, ಈ ಯೋಜನೆ ಜಾರಿಗೆ ಬರಲು ಕೊಂಚ ಸಮಯ ತಗಲುವ ಸಾಧ್ಯತೆ ಇದೆ. ಯಾಕೆಂದರೆ ಕೆಎಎಫ್ಗೆ ಈ ಮಿಠಾಯಿ ಸ್ಯಾಂಪಲ್ಸ್ ನೀಡುವಂತೆ ಇಲಾಖೆ ಸೂಚಿಸಿದೆ. ಪೌಷ್ಠಿಕಾಂಶದಿಂದ ಕೂಡಿದ ಈ ಮಿಠಾಯಿಯನ್ನ ತಜ್ಞರು ಒಪ್ಪಿಗೆ ಸೂಚಿಸಿದ್ದರೆ, ಬಾಳೆಹಣ್ಣು ಬೇಡ ಎನ್ನುವ ಮಕ್ಕಳು ಚಿಕ್ಕಿಯನ್ನ ಸೇವಿಸಬಹುದಾಗಿದೆ.
ಇದನ್ನೂ ಓದಿರಿ: ಅದ್ಧೂರಿ ಮದುವೆ ತಂದಿಟ್ಟ ಫಜೀತಿ... ಕ್ರೇನ್ ಮೇಲಿಂದ ಬಿದ್ದ ವಧು-ವರ!
ಮೊಟ್ಟೆ ಸೇವಿಸದ ಮಕ್ಕಳು ಬಾಳೆಹಣ್ಣು ಹಾಗೂ ಶೇಂಗಾ ಮಿಠಾಯಿ ಪಡೆದುಕೊಳ್ಳಬಹುದಾಗಿದೆ. ಕಲ್ಯಾಣ ಕರ್ನಾಟಕದ ಕೊಪ್ಪಳ, ಬೀದರ್, ಯಾದಗಿರಿ, ಕಲಬುರಗಿ, ಬೀದರ್, ಬಳ್ಳಾರಿ, ರಾಯಚೂರು ಸೇರಿದಂತೆ ಬಿಜಾಪುರ ಜಿಲ್ಲೆಯಲ್ಲಿ 1 ರಿಂದ 8ನೇ ತರಗತಿವರೆಗೆ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಅಪೌಷ್ಠಿಕತೆ ಮತ್ತು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷಾ ವರದಿಯಲ್ಲಿ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಅಪೌಷ್ಠಿಕತೆ ನಿವಾರಣೆಗಾಗಿ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದೊಂದಿಗೆ ವಾರದಲ್ಲಿ 3 ದಿನಗಳ ಕಾಲ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ಮಾಡಲು ಮುಂದಾಗಿತ್ತು.ಇದೀಗ, ಇದರ ಮುಂದುವರೆದ ಭಾಗವಾಗಿ ಶೇಂಗಾ ಚಿಕ್ಕಿ ನೀಡಲು ಚಿಂತನೆ ನಡೆದಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮಕ್ಕಳು ಪೌಷ್ಟಿಕಾಂಶ ಭರಿತ ಚಿಕ್ಕಿಯನ್ನೂ ಸೇವಿಸಬಹುದಾಗಿದೆ.