ಬೆಂಗಳೂರು: ಪ್ರತಿ ಬಾರಿಯೂ ಗೌರಿ ಗಣೇಶ ಹಬ್ಬವನ್ನು ಎಲ್ಲೆಡೆ ಸಂಭ್ರಮ-ಸಡಗರದಿಂದ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಉಂಟಾದ ಭೀಕರ ನೆರೆ, ಹಬ್ಬದ ಸಡಗರವನ್ನು ಕಳೆಗುಂದಿಸಿದೆ.
ರಾಜ್ಯದಲ್ಲಿ ಈ ಬಾರಿ ಯಾರು ಊಹೆ ಮಾಡದ ರೀತಿಯಲ್ಲಿ ಹಲವು ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿದ್ದವು. ಹಲವೆಡೆ ಲಕ್ಷಾಂತರ ಮಂದಿ ಮನೆ -ಮಠ ಕಳೆದುಕೊಂಡರು. ಹೀಗಿರುವಾಗ ಹಬ್ಬ ಮಾಡುವ ಮನಸ್ಸಾದರೂ ಹೇಗೆ ತಾನೇ ಬರಬೇಕು. ಹೀಗಾಗಿ ಉದ್ಯಾನನಗರಿಯಲ್ಲಿ ನಿರೀಕ್ಷೆ ಮಾಡಿದಷ್ಟು ಗಣೇಶ ಮೂರ್ತಿಗಳ ಖರೀದಿ- ಮಾರಾಟವಾಗಿಲ್ಲ ಅಂತಾರೆ ಮಾರಾಟಗಾರರು.
ಈ ಸಲ ಹಬ್ಬವನ್ನ ವಿಜೃಂಭಣೆಯಿಂದ ಆಚರಣೆ ಮಾಡುವ ಬದಲು, ಪುಟ್ಟ ಗಣಪನಿಗೆ ಪೂಜಿಸಿ ಸರಳವಾಗಿ ಆಚರಿಸಲು ಸಾರ್ವಜನಿಕರು ಮುಂದಾಗಿರುವುದರಿಂದ ಮೂರ್ತಿ ತಯಾರಕರ ಹೊಟ್ಟೆ ಪಾಡು ಹೇಳತೀರದಾಗಿದೆ. .
ಇತ್ತ ಪಿಒಪಿ ಗಣೇಶ ಮೂರ್ತಿಗಳು ಬ್ಯಾನ್ ಆಗಿದ್ದು, ಮಣ್ಣಿನ ಗಣೇಶ ಮೂರ್ತಿಗಳ ಬೆಲೆ ಏರಿಕೆ ಆಗಿದೆ. ಇದು ಕೂಡ ಹಬ್ಬದ ಸಂಭ್ರಮಕ್ಕೆ ಕೊಂಚ ಅಡ್ಡಿಯಾಗಿದೆ. ಈ ಬಾರಿ ವಿಶೇಷವಾಗಿ, ಗಣೇಶ ಮೊಬೈಲ್ ಫೋನ್ನಲ್ಲಿ ಮಾತಾಡೋದರಲ್ಲಿ ಬ್ಯುಸಿಯಾಗಿರುವುದು, ತನ್ನ ವಾಹಕನಿಗೆ ಪಾಠ ಮಾಡುವ ಹಾಗೇ, ಇನ್ನು ತನ್ನಿಷ್ಟದ ಕಡುಬು ಸವಿಯುತ್ತಿರುವ ಮೂರ್ತಿಗಳು ಎಲ್ಲರನ್ನು ಆಕರ್ಷಿಸುತ್ತಿದೆ. ಮಕ್ಕಳು ಕೂಡ ವಿಭಿನ್ನವಾಗಿರುವ ಗಣೇಶ ಮೂರ್ತಿಗಳನ್ನ ನೋಡಿ ಫೋಟೋ ಕಿಕ್ಲಿಸಿಕೊಳ್ಳುತ್ತಿದ್ದ ದೃಶ್ಯ ನಗರದಲ್ಲಿ ಕಂಡು ಬಂತು.