ಬೆಂಗಳೂರು: ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಜಮೀನು ಹಂಚಿಕೆ ನೀತಿಯಲ್ಲಿ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ.
ಕರ್ನಾಟಕವನ್ನು ಕೈಗಾರಿಕಾಸ್ನೇಹಿ ಮಾಡಲು ಸರ್ಕಾರ ನಾನಾ ಕಸರತ್ತು ನಡೆಸುತ್ತಿದೆ. ಕೈಗಾರಿಕಾ ನೀತಿಗಳಿಗೆ ತಿದ್ದುಪಡಿ ತರುವ ಮೂಲಕ ಉತ್ತಮ ಕೈಗಾರಿಕಾ ವಾತಾವರಣವನ್ನು ಸೃಷ್ಟಿಸಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ಸರ್ಕಾರ ಭೂ ಸುಧಾರಣಾ ಕಾಯ್ದೆ, ಕೈಗಾರಿಕಾ ನೀತಿಗೆ ತಿದ್ದುಪಡಿ ತರುವ ಮೂಲಕ ರಾಜ್ಯದಲ್ಲಿ ಕೈಗಾರಿಕೆಗಳಿಗೆ ಪೂರಕವಾದ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿದೆ. ಇದೀಗ ಸರ್ಕಾರ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಜಮೀನು ಹಂಚಿಕೆ ನೀತಿಗೆ ತಿದ್ದುಪಡಿ ತರಲು ಮುಂದಾಗಿದೆ. ಮೊನ್ನೆ ನಡೆದ ಸಂಪುಟ ಸಭೆಯಲ್ಲಿ ತಿದ್ದುಪಡಿ ನೀತಿ ಪ್ರಸ್ತಾವನೆಯನ್ನು ತರಲಾಗಿತ್ತು. ಆದರೆ ತಿದ್ದುಪಡಿ ನೀತಿ ಸಂಬಂಧ ಇನ್ನಷ್ಟು ವಿವರಣೆ, ಸ್ಪಷ್ಟತೆ ಕೋರಿ ಸಿಎಂ ವಿಚಾರವನ್ನು ಮುಂದಕ್ಕೆ ಹಾಕಿದ್ದಾರೆ.
ಏನಿದು ಉದ್ದೇಶಿತ ಹೊಸ ನೀತಿ?:
ಉದ್ದೇಶಿತ ತಿದ್ದುಪಡಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆ.ಐ.ಎ.ಡಿ.ಬಿ) ವತಿಯಿಂದ ಜಮೀನು ಹಂಚಿಕೆ ಹಾಗೂ ಲೀಸ್ ಕಂ ಸೇಲ್ ಆಧಾರದ ಮೇಲೆ ಹಂಚಿಕೆಯಾದ ಜಮೀನಿಗೆ ಕ್ರಯ ಪತ್ರ ನೆರವೇರಿಸುವುದು ಅಂದರೆ ಮಾರಾಟ ಮಾಡುವ ಅಧಿಕಾರ ನೀಡುವುದು ಈ ಹೊಸ ನೀತಿಯ ಉದ್ದೇಶವಾಗಿದೆ.
ಖಾಸಗಿ ಕಂಪನಿಗಳು ಗುತ್ತಿಗೆ ಪಡೆದ ಜಮೀನನ್ನು ಅಡಮಾನವಿಡಲು ಹಾಗೂ ಬ್ಯಾಂಕ್/ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಸಮಸ್ಯೆ ಎದುರಿಸುತ್ತಿವೆ. ಕೆ.ಐ.ಎ.ಡಿ.ಬಿ ಜಮೀನು ಹಂಚಿಕೆಗಾಗಿ ಮುಂಗಡವಾಗಿ ಮೊತ್ತವನ್ನು ಪಡೆಯುತ್ತಿರುವುದರಿಂದ ಖಾಸಗಿ ಕಂಪನಿಗಳು ಕೆ.ಐ.ಎ.ಡಿ.ಬಿ.ಯಿಂದ ಗುತ್ತಿಗೆ ಆಧಾರದಲ್ಲಿ ಜಮೀನು ಹಂಚಿಕೆ ಪಡೆಯಲು ಹಿಂಜರಿಯುತ್ತಿವೆ. ಹೀಗಾಗಿ ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸಲು ಅನುವಾಗುವಂತೆ ಈ ಹಿಂದೆ ಇದ್ದಂತೆ ಕೆ.ಐ.ಎ.ಡಿ.ಬಿ.ಯಿಂದ ಹಂಚಿಕೆ ಮಾಡುವ ಜಮೀನುಗಳನ್ನು 10 ವರ್ಷಗಳ ಲೀಸ್ ಕಂ ಸೇಲ್ ಆಧಾರದ ಮೇಲೆ ಹಂಚಿಕೆ ಮಾಡಲು ತಿದ್ದುಪಡಿ ತರಲಾಗುತ್ತಿದೆ.
ಇದನ್ನೂ ಓದಿ: ತುಮಕೂರು: ಶಾಲೆಗೆ ಬಾರದ ವಿದ್ಯಾರ್ಥಿ ಕರೆತರಲು ಹೋದ ಶಿಕ್ಷಕನ ಮೇಲೆ ಪಾನಮತ್ತ ಇಬ್ಬರಿಂದ ಹಲ್ಲೆ
ಕೈಗಾರಿಕಾ ಘಟಕವನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಹಾಗೂ ಖಾಸಗಿ ಕಂಪನಿಗಳು ಹಣಕಾಸು ಸಂಸ್ಥೆಗಳಿಂದ ಬಂಡವಾಳ ಪಡೆಯಲು ಅನುಕೂಲವಾಗುವುದರಿಂದ ತಮ್ಮ ಘಟಕವನ್ನು ಅನುಷ್ಠಾನಗೊಳಿಸಿ ಕೆ.ಐ.ಎ.ಡಿ.ಬಿ. ನಿಯಮಾವಳಿ ಪ್ರಕಾರ ಕನಿಷ್ಠ ಶೇ. 51ರಷ್ಟು ಜಮೀನನ್ನು ಉಪಯೋಗಿಸಿದ ನಂತರ, ಶುದ್ಧ ಕ್ರಯ ಪತ್ರವನ್ನು ನೆರವೇರಿಸಲು ಈ ತಿದ್ದುಪಡಿಯಿಂದ ಸಾಧ್ಯವಾಗಲಿದೆ. ಹೀಗಾಗಿ, ಈ ಹಿಂದಿನಂತೆ ಲೀಸ್ ಕಂ ಸೇಲ್ ಕರಾರು ಪತ್ರದಲ್ಲಿಅವಧಿ ಕಡಿತಗೊಳಿಸುವ ಷರತ್ತನ್ನು ಅಳವಡಿಸಲು ಯೋಜಿಸಲಾಗಿದೆ.
ಭೂ ಹಂಚಿಕೆಗೆ ಹಿಂದೇಟು:
ಪ್ರಸ್ತುತ ಕೆ.ಐ.ಎ.ಡಿ.ಬಿ ಖಾಸಗಿ ಕೈಗಾರಿಕೆಗಳಿಗೆ 2 ಎಕರೆಗಿಂತ ಮೇಲ್ಪಟ್ಟು ಜಮೀನು ಹಂಚಿಕೆಯನ್ನು 99 ವರ್ಷಗಳ ಕಾಲ ಲೀಸ್ ಆಧಾರದ ಮೇಲೆ ಹಂಚಿಕೆ ಮಾಡುತ್ತಿದೆ. ಇದರಿಂದ ಬ್ಯಾಂಕ್, ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಕಷ್ಟಕರವಾಗುತ್ತಿದೆ. ಜೊತೆಗೆ ಲೀಸ್‌ಗೆ ಒಳಪಟ್ಟ ಭೂಮಿಯನ್ನು ಬ್ಯಾಂಕ್ಗಳು ಅಡಮಾನ ಪಡೆಯಲು ಒಪ್ಪುತ್ತಿಲ್ಲ. ಹಾಗೂ ಭೂಮಿಯ ಸಂಪೂರ್ಣ ಹಂಚಿಕೆ ಮೊತ್ತವನ್ನು ಮುಂಚಿತವಾಗಿ ಪಾವತಿಸಿಕೊಳ್ಳುತ್ತಿರುವುದರಿಂದ ಖಾಸಗಿ ಬೃಹತ್ ಕಂಪನಿಗಳು ಕೆ.ಐ.ಎ.ಡಿ.ಬಿ.ಯಿಂದ ಭೂ ಹಂಚಿಕೆಗೆ ಹಿಂದೇಟು ಹಾಕುತ್ತಿವೆ.
ಇದರಿಂದ ರಾಜ್ಯಕ್ಕೆ ಬಂಡವಾಳ ಹೂಡಿಕೆಯು ಕುಂಠಿತವಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಹೆಚ್ಚಿನ ಬಂಡವಾಳವನ್ನು ಆಕರ್ಷಿಸುವ ದೃಷ್ಟಿಯಿಂದ 2014ನೇ ಸಾಲಿನ ಮುಂಚಿನಂತಿದ್ದ ಕೆ.ಐ.ಎ.ಡಿ.ಬಿ.ಯಿಂದ ಹಂಚಿಕೆ ಮಾಡುವ ಎಲ್ಲಾ ಜಮೀನುಗಳನ್ನು 10 ವರ್ಷಗಳ ಲೀಸ್ ಕಂ ಸೇಲ್ ಆಧಾರದ ಮೇಲೆ ಹಂಚಿಕೆ ಮಾಡುವುದು ಸೂಕ್ತ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಇದನ್ನೂ ಓದಿ: ಬೇಡಿಕೆಗೆ ಒಪ್ಪಿದ ಕೇಂದ್ರ: ಪ್ರತಿಭಟನೆ ಹಿಂಪಡೆಯುವ ಬಗ್ಗೆ ಇಂದು ರೈತರ ಸಭೆ
ಈ ಹಿಂದಿನ ನಿಯಮ ಏನಿತ್ತು?:
ಸದ್ಯ ಕೆಐಎಡಿಬಿ ಖಾಸಗಿ ಕಂಪನಿಗಳಿಗೆ ನಿವೇಶನ ಹಂಚಿಕೆಯನ್ನು 99 ವರ್ಷಗಳ ಲೀಸ್ ಅವಧಿಗೆ ಮಾಡುತ್ತಿದೆ. 2014ರಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ತನ್ನ ಕೈಗಾರಿಕಾ ಪ್ರದೇಶಗಳಲ್ಲಿ ಏಕ ಘಟಕ ಸಂಕೀರ್ಣಗಳನ್ನು ಮತ್ತು ವಸತಿ ಸಂಕೀರ್ಣಗಳನ್ನೊಳಗೊಂಡಂತೆ 99 ವರ್ಷಗಳ ಗುತ್ತಿಗೆ ಅವಧಿಗೆ ಭೂಮಿಯನ್ನು ಹಂಚಿಕೆ ಮಾಡಲು ಆದೇಶ ಹೊರಡಿಸಿತ್ತು.
ಬಳಿಕ ಕೇಂದ್ರ ಸರ್ಕಾರದ ಉದ್ಯಮಗಳು/ ಸಾರ್ವಜನಿಕ ವಲಯದ ಉದ್ಯಮಗಳು, ಏಕ ಘಟಕ ಸಂಕೀರ್ಣಗಳು ಮತ್ತು ವಸತಿ ಸಂಕೀರ್ಣಗಳನ್ನು 99 ವರ್ಷಗಳ ಗುತ್ತಿಗೆ ಅವಧಿಯ ವ್ಯಾಪ್ತಿಯಿಂದ ಹೊರತುಪಡಿಸಲಾಗಿತ್ತು.
2014ಕ್ಕೂ ಮುನ್ನ ಕೆಐಎಡಿಬಿ, ಕೈಗಾರಿಕೋದ್ಯಮಿಗಳಿಗೆ ಭೂಮಿಯನ್ನು ಲೀಸ್ ಕಂ ಸೇಲ್ ಡೀಲ್ ಆಧಾರದಲ್ಲೇ ಭೂಮಿ ಹಂಚಿಕೆ ಮಾಡುತ್ತಿತ್ತು. ಆದರೆ, ಕೈಗಾರಿಕೋದ್ಯಮಿಗಳು ಯಾವ ಉದ್ದೇಶಕ್ಕೆ ಭೂಮಿಯನ್ನು ಪಡೆದುಕೊಂಡಿದ್ದರು, ಆ ಉದ್ದೇಶಕ್ಕೆ ಬಳಸದೇ ಅದನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು. ಇದಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ 2014ರಲ್ಲಿ ಖಾಸಗಿ ಕಂಪನಿಗಳಿಗೆ ನಿವೇಶನ ಹಂಚಿಕೆಯನ್ನು 99 ವರ್ಷಗಳ ಲೀಸ್ ಅವಧಿಗೆ ನೀಡುವ ಸಂಬಂಧ ತಿದ್ದುಪಡಿ ತರಲಾಯಿತು.
ತಿದ್ದುಪಡಿಗೆ ರೈತರಿಂದ ಆಕ್ಷೇಪ:
ಈ ನೂತನ ತಿದ್ದುಪಡಿಗೆ ರೈತ ಸಮುದಾಯ ವಿರೋಧ ವ್ಯಕ್ತಪಡಿಸಿದೆ. ಇದರಿಂದ ಕೈಗಾರಿಕೋದ್ಯಮಿಗಳು ಕೆಐಎಡಿಬಿ ಹಂಚಿಕೆ ಮಾಡಲ್ಪಟ್ಟ ಭೂಮಿಯನ್ನು ದುರ್ಬಳಕೆ ಮಾಡುವ ಸಾಧ್ಯತೆ ಇದೆ. ಕಾರ್ಪೊರೇಟ್ಗಳಿಗೆ ಅನುಕೂಲ ಮಾಡಲು ಸರ್ಕಾರ ಈ ತಿದ್ದುಪಡಿ ನೀತಿಯನ್ನು ತರಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ.
ಜೊತೆಗೆ 2014ರ ಮುಂಚೆ ಲೀಸ್ ಕಂ ಸೇಲ್ ಆಧಾರದಲ್ಲಿ ಕೈಗಾರಿಕೆಗಳಿಗೆ ನಿವೇಶನ ಹಂಚಿಕೆ ಮಾಡಲಾಗುತ್ತಿತ್ತು. ಆದರೆ, ಆ ಸಂದರ್ಭ ಅನೇಕ ಕೈಗಾರಿಕೋದ್ಯಮಿಗಳು ಅನ್ಯ ಉದ್ದೇಶಕ್ಕೆ ಭೂಮಿಯನ್ನು ಬಳಸಿ ನಿವೇಶನವನ್ನು ಮಾರಾಟ ಮಾಡುತ್ತಿರುವ ಪ್ರಕರಣ ಹೆಚ್ಚಾಗಿ ವರದಿಯಾಗುತ್ತಿತ್ತು. ಅದಕ್ಕಾಗಿ ಲೀಸ್ ಕಂ ಸೇಲ್ ಆಧಾರದಲ್ಲಿ ನಿವೇಶನ ಹಂಚಿಕೆ ಮಾಡುವ ನೀತಿಯನ್ನು ಸರ್ಕಾರ ಕೈ ಬಿಡಲಾಗಿತ್ತು. ಇದೀಗ ಮತ್ತೆ ಅದೇ ನೀತಿಯನ್ನು ಜಾರಿಗೆ ತರುವುದರ ಹಿಂದೆ ಪಟ್ಟಭದ್ರ ಹಿತಾಸಕ್ತಿ ಅಡಗಿದೆ ಎಂಬ ಆರೋಪ ಕೇಳಿ ಬಂದಿದೆ.