ಬೆಂಗಳೂರು: ರಾಜ್ಯದಲ್ಲಿ ಸ್ಥಗಿತಗೊಂಡಿದ್ದ 59 ಸಾಂತ್ವನ ಕೇಂದ್ರಗಳನ್ನು ಮುಂದುವರಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಕಳೆದ ವರ್ಷ ಏಪ್ರಿಲ್ 22 ರಂದು 71 ತಾಲೂಕುಗಳಲ್ಲಿನ ಸಾಂತ್ವನ ಕೇಂದ್ರಗಳನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಲಾಗಿತ್ತು. ಕೋವಿಡ್ ಅವಧಿಯಲ್ಲಿ ಕೌಟುಂಬಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸಾಂತ್ವನ ಕೇಂದ್ರಗಳಲ್ಲಿ ಹೆಚ್ಚಿನ ನೆರವು ಸಿಗುತ್ತಿತ್ತು. ಹೀಗಾಗಿ ಸ್ಥಗಿತವಾಗಿರುವ ಸಾಂತ್ವನ ಕೇಂದ್ರಗಳನ್ನು ಮುಂದುವರಿಸುವಂತೆ ಶಾಸಕರು ಸೇರಿ ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿತ್ತು.
ಈ ಹಿನ್ನೆಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರು ಮುಂದುವರಿಸಬೇಕಾದ ಸಾಂತ್ವನ ಕೇಂದ್ರಗಳ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ರಾಜ್ಯದಲ್ಲಿ ಒಟ್ಟು 194 ಮಹಿಳಾ ಸಾಂತ್ವನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದವು. ಈ ಪೈಕಿ 71 ತಾಲೂಕುಗಳಲ್ಲಿನ ಸಾಂತ್ವನ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿತ್ತು.
ಇದೀಗ ಸರ್ಕಾರ 59 ಸಾಂತ್ವನ ಕೇಂದ್ರಗಳನ್ನು ಮುಂದುವರಿಸಲು ಆದೇಶ ಹೊರಡಿಸಿದೆ. ಮೂರು ತಿಂಗಳಿಗೆ ಈ ಸಾಂತ್ವನ ಕೇಂದ್ರಗಳಿಗೆ ತಗುಲುವ 95 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
(ಇದನ್ನೂ ಓದಿ: ಕೋವಿಡ್ನಿಂದ ಪತಿ ನಿಧನ : ತಬ್ಬಲಿ ಮಗು, ವಿಧವೆಗೆ ಹೊಸ ಬಾಳು ನೀಡಿದ ಮೃತ ಗಂಡನ ಸಹೋದರ!)