ಬೆಂಗಳೂರು: ನಗರದ ಹೊರ ವರ್ತುಲ ರಸ್ತೆಯಲ್ಲಿನ (ಔಟರ್ ರಿಂಗ್ ರೋಡ್) ಐಟಿ ಕಂಪನಿಗಳು ಮತ್ತು ಟೆಕ್ ಪಾರ್ಕ್‌ಗಳ ಉದ್ಯೋಗಿಗಳಿಗೆ 2022ರ ಡಿಸೆಂಬರ್‌ವರೆಗೂ ವರ್ಕ್ ಫ್ರಮ್ ಹೋಮ್ ಮುಂದುವರಿಸುವಂತೆ ರಾಜ್ಯ ವಿದ್ಯುನ್ಮಾನ, ಐಟಿ, ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ ರಮಣ ರೆಡ್ಡಿ ಸೂಚನೆ ನೀಡಿದ್ದಾರೆ.
ರಾಜಧಾನಿಯ ಹೊರ ವರ್ತುಲ ರಸ್ತೆಯಲ್ಲಿ ನಮ್ಮ ಮೆಟ್ರೋ ಕಾಮಗಾರಿ ಶೀಘ್ರದಲ್ಲಿಯೇ ಆರಂಭವಾಗುತ್ತಿದೆ. ಈ ಸಂದರ್ಭದಲ್ಲಿ ರಸ್ತೆಯ ಸುತ್ತಮುತ್ತಲಿನ ಐಟಿ ಕಂಪನಿಗಳು ಮರು ಕಾರ್ಯಾರಂಭ ಮಾಡಿದರೆ ವಿಪರೀತ ಸಂಚಾರ ದಟ್ಟಣೆ ಉಂಟಾಗಲಿದೆ. ಹೀಗಾಗಿ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ವಿಸ್ತರಿಸುವಂತೆ ಇಲಾಖೆ ಆಗಸ್ಟ್ 21 ರಂದು ಐಟಿ ಉದ್ಯಮ ಸಂಘಟನೆ ನಾಸ್ಕಾಮ್‌ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (ಬಿಎಂಆರ್‌ಸಿಎಲ್) ಶೀಘ್ರದಲ್ಲಿಯೇ ಕೇಂದ್ರ ರೇಷ್ಮೆ ಮಂಡಳಿ (ಸಿಲ್ಕ್ ಬೋರ್ಡ್) ಕೆಆರ್ ಪುರಂ ಮಾರ್ಗದ ಮೆಟ್ರೋ ಕಾಮಗಾರಿ ಆರಂಭಿಸಲಿದೆ. ಈ ಕಾಮಗಾರಿ 1 ವರೆಯಿಂದ 2 ವರ್ಷಗಳವರೆಗೂ ವಿಸ್ತರಣೆಯಾಗಬಹುದು ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕಡ್ಡಾಯ ಸೂಚನೆಯಲ್ಲ:
ಇದು ಸಲಹೆ ಮಾತ್ರ, ಕಂಪನಿಗಳು ಅದನ್ನು ಪಾಲಿಸುವುದು ಕಡ್ಡಾಯವಲ್ಲ. ಅವರಿಗೆ ಅಗತ್ಯವಿದ್ದರೆ ಕಚೇರಿಯಿಂದಲೇ ಕೆಲಸ ಮಾಡುವುದನ್ನು ಮುಂದುವರಿಸಬಹುದು ಎಂದು ರಮಣ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ವರ್ಕ್ ಫ್ರಮ್ ಹೋಂ:
ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಬಹುತೇಕ ಕಂಪನಿಗಳು ವರ್ಕ್ ಫ್ರಮ್ ಹೋಮ್ ಸೌಲಭ್ಯ ಕಲ್ಪಿಸಿವೆ. ಇದನ್ನು ಇನ್ನೂ ಅನೇಕ ತಿಂಗಳು ಮುಂದುವರಿಸಲು ನಿರ್ಧರಿಸಿವೆ. ಹೀಗಾಗಿ, ಈ ಭಾಗದಲ್ಲಿ ಅಷ್ಟೇನೂ ಸಂಚಾರ ದಟ್ಟಣೆ ಉಂಟಾಗುತ್ತಿಲ್ಲ. ಆದರೆ ಐಟಿ ಕಂಪನಿಗಳು ಕಚೇರಿಯಿಂದ ಕೆಲಸ ಕಡ್ಡಾಯಗೊಳಿಸಿದರೆ ವಾಹನ ದಟ್ಟಣೆ ಉಂಟಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಐಟಿ ಕಂಪನಿಗಳು 2022ರ ಡಿಸೆಂಬರ್ ಅಂತ್ಯದವರೆಗೂ ವರ್ಕ್ ಫ್ರಮ್ ಹೋಮ್ ವಿಸ್ತರಿಸಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.