ಬೆಂಗಳೂರು: ರಾಜ್ಯದಲ್ಲಿ ನಾಳೆಯಿಂದ ಜನವರಿ 2ರ ಮುಂಜಾನೆಯವರೆಗೂ ರಾತ್ರಿ ಕರ್ಫ್ಯೂ ಜಾರಿಗೊಳಿಸಿದ್ದು, ಸರಕು ಸಾಗಾಣಿಕೆ ವಾಹನ, ಬಸ್, ರೈಲು, ವಿಮಾನ ಸಂಚಾರಕ್ಕೆ ಕರ್ಫ್ಯೂದಿಂದ ವಿನಾಯಿತಿ ನೀಡಲಾಗಿದೆ. ಕೈಗಾರಿಕೆಗಳಿಗೂ ನಿರ್ಬಂಧ ಸಡಿಲಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಕೊರೊನಾ ರೂಪಾಂತರ ಸೋಂಕಿನ ಭೀತಿಯಿಂದಾಗಿ ಇಂದಿನಿಂದ ಜಾರಿಗೊಳಿಸಲುದ್ದೇಶಿಸಿದ್ದ ರಾತ್ರಿ ಕರ್ಫ್ಯೂವನ್ನು ಇಂದಿನ ಬದಲು ನಾಳೆಯಿಂದ ಅನ್ವಯವಾಗುವಂತೆ ಸರ್ಕಾರ ಆದೇಶ ಹೊರಡಿಸಲಾಗಿದೆ. ಸಮಯ ಬದಲಿಸುವಂತೆ ಬಂದ ಮನವಿಗಳನ್ನೂ ಪರಿಗಣಿಸಿ ರಾತ್ರಿ 10ರಿಂದ ಬೆಳಗ್ಗೆ 6ರ ಬದಲು ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ಅನ್ವಯವಾಗುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಮಾರ್ಗಸೂಚಿಯ ಹೈಲೈಟ್ಸ್:
- ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ರಾಜ್ಯಾದ್ಯಂತ ಕಟ್ಟುನಿಟ್ಟಾಗಿ ಕರ್ಫ್ಯೂ ಜಾರಿ
- ಎಲ್ಲಾ ರೀತಿಯ ಸರಕು ಸಾಗಾಣಿಕೆ ವಾಹನಗಳು, ಸರಕು ತುಂಬಿದ ಹಾಗೂ ಖಾಲಿ ವಾಹನ ಎರಡಕ್ಕೂ ನಿರ್ಬಂಧದಿಂದ ಸಡಿಲಿಕೆ.
- ಶೇ. 50ರಷ್ಟು ಮಾನವ ಶಕ್ತಿಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ರೀತಿಯ ಕೈಗಾರಿಕಾ ಸಂಸ್ಥೆಗಳು, ಕಂಪನಿಗಳ ಉದ್ಯೋಗಿಗಳು ಕಂಪನಿ ನೀಡಿರುವ ಗುರುತಿನ ಚೀಟಿಯೊಂದಿಗೆ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು, ಸಂಚಾರ ಮಾಡಲು ಅನುಮತಿ ನೀಡಲಾಗಿದೆ.
- ದಿನದ 24 ಗಂಟೆ ಕರ್ತವ್ಯ ನಿರ್ವಹಿಸುತ್ತಿರುವ ಕೈಗಾರಿಕೆಗಳು, ಕಾರ್ಖಾನೆಗಳಿಗೆ ಯಾವುದೇ ರೀತಿಯ ನಿರ್ಬಂಧವಿಲ್ಲದೆ ನಿರಂತರ ಕಾರ್ಯಾಚರಣೆ ನಡೆಸಲು ಅನುಮತಿ.
- ದೂರದ ಸಂಚಾರ ಮಾಡುವ ರಾತ್ರಿ ಬಸ್ಗಳು, ರೈಲುಗಳು ಹಾಗೂ ವಿಮಾನಗಳ ಸಂಚಾರಕ್ಕೆ ಅನುಮತಿ.
- ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳಿಂದ ಪ್ರಯಾಣಿಕರನ್ನು ಕರೆತರಲು ಹಾಗೂ ಕರೆದೊಯ್ಯಲು ಟ್ಯಾಕ್ಸಿ ಹಾಗೂ ಆಟೋಗಳಿಗೆ ಅನುಮತಿ. ಈ ವೇಳೆ ಪ್ರಯಾಣದ ಟಿಕೆಟ್ಅನ್ನು ಪ್ರಯಾಣಿಕರು ಹೊಂದಿರುವುದು ಕಡ್ಡಾಯ.
- ಡಿಸೆಂಬರ್ 24ರ ರಾತ್ರಿ ಕ್ರಿಸ್‌ಮಸ್ ಪ್ರಾರ್ಥನೆ ಸಲ್ಲಿಕೆಗೆ ಅವಕಾಶ. ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಆಚರಣೆ ಕುರಿತು ಡಿಸೆಂಬರ್ 17ರಂದು ಹೊರಡಿಸಲಾಗಿದ್ದ ಮಾರ್ಗಸೂಚಿಯೇ ಅನ್ವಯವಾಗಲಿದೆ.