ಬೆಂಗಳೂರು: ರಾಜ್ಯದಲ್ಲಿರುವ ಹುಕ್ಕಾಬಾರ್ ಮತ್ತು ಡ್ಯಾನ್ಸ್ ಬಾರ್ಗಳ ಮೇಲೆ ಕ್ರಮ ತೆಗೆದುಕೊಳ್ಳಲು ಗೃಹ ಸಚಿವರೇ ಅಸಹಾಯಕತೆ ವ್ಯಕ್ತಪಡಿಸಿದ ಘಟನೆ ವಿಧಾನ ಪರಿಷತ್ನಲ್ಲಿ ನಡೆಯಿತು. ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್ ರಮೇಶ್ ಹುಕ್ಕಾಬಾರ್ಗಳನ್ನು ನಿಯಂತ್ರಣ ಮಾಡಲು ಸರ್ಕಾರದ ಕ್ರಮಗಳೇನು? ಇದು ಶಾಲಾ ಮಕ್ಕಳ ಮೇಲೆ ಪ್ರಭಾವ ಬೀರುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಹುಕ್ಕಾಬಾರ್ ಮತ್ತು ಡ್ಯಾನ್ಸ್ ಬಾರ್ಗಳನ್ನು ನಡೆಸಲು ಪೊಲೀಸ್ ಇಲಾಖೆ ವತಿಯಿಂದ ಲೈಸನ್ಸ್ ನೀಡಲಾಗುವುದಿಲ್ಲ. ಅವು ಬಿಬಿಎಂಪಿಯಿಂದ ಟ್ರೇಡ್ ಲೈಸೆನ್ಸ್ ಪಡೆದಿರುತ್ತವೆ.
ಅಲ್ಲದೇ ಈ ಬಾರ್ಗಳನ್ನು ನಡೆಸುವವರು ಕೋರ್ಟ್ನಿಂದ ಕೆಲವು ಆದೇಶಗಳನ್ನು ತಂದಿದ್ದಾರೆ. ಹುಕ್ಕಾಬಾರ್ಗಳನ್ನು ಸ್ಮೋಕಿಂಗ್ ಝೋನ್ ಎಂದು ಪರಿಗಣಿಸಿ ನ್ಯಾಯಾಲಯ ಆದೇಶ ನೀಡಿದೆ. ಪದೇ ಪದೆ ಪೊಲೀಸರು ಈ ಸ್ಥಳಗಳಿಗೆ ತೆರಳಿ ತನಿಖೆ ನೆಪದಲ್ಲಿ ತೊಂದರೆ ಕೊಡಬಾರದೆಂದು ನ್ಯಾಯಾಲಯವು ಸೂಚಿಸಿದೆ. ಹಾಗಾಗಿ ಇವುಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತಿಲ್ಲ.
ಅದಾಗ್ಯೂ ಸಿಸಿಬಿಯಿಂದ ಕೆಲವು ಹುಕ್ಕಾಬಾರ್ಗಳ ಮೇಲೆ ದಾಳಿ ನಡೆಸಿ ಅಲ್ಲಿ ಬಳಸುವ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳಲ್ಲಿ ಇರುವ ಕಂಟೆಂಟ್ಗಳನ್ನು ಪರಿಶೀಲಿಸಲಾಗುತ್ತಿದೆ. ಒಂದು ವೇಳೆ, ಶಾಲಾ ಮಕ್ಕಳ ಮೇಲೆ ಪರಿಣಾಮ ಬೀರುವ ಅಂಶಗಳು ಇದ್ದರೆ ಖಂಡಿತ ಇವುಗಳ ಮೇಲೆ ಮುಂದಿನ ದಿನಗಳಲ್ಲಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ: ಸಾಮಾಜಿಕ ಜಾಲತಾಣದ ಮೇಲೆ ಹದ್ದಿನ ಕಣ್ಣಿಟ್ಟ ಪೊಲೀಸರಿಗೆ ನಗದು ಬಹುಮಾನ ಹಸ್ತಾಂತರ
ಇದೇ ವೇಳೆ, ಬೆಂಗಳೂರಿನಲ್ಲಿ ಡ್ಯಾನ್ಸ್ ಬಾರ್ಗಳು ಇಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ಪಿ.ಆರ್ ರಮೇಶ್, ಬನ್ನಿ ತೋರಿಸುತ್ತೇನೆ ಎಂದರು. ಈ ವೇಳೆ, ನೀವ್ಯಾಕೆ ಅಲ್ಲಿ ಹೋಗಿದ್ದಿರಿ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಪಿ.ಆರ್ ರಮೇಶ್ ಕಾಲೆಳೆದರು. ಇದಕ್ಕೆ ಪ್ರತಿಯಾಗಿ ನಾನು ಹೋಗುತ್ತೇನೆ ಅಂತ ಹೇಳಿಲ್ಲ, ತೋರಿಸ್ತೀನಿ ಬನ್ನಿ ಎಂದಷ್ಟೇ ಹೇಳಿದೆ ಎಂದು ಟಾಂಗ್ ನೀಡಿದರು.