ಬೆಂಗಳೂರು: ರೈತರು ಬೆಳೆದ ಹಣ್ಣು ಹಾಗೂ ತರಕಾರಿಗಳನ್ನು ಮಾರಾಟ ಮಾಡಲು ಅಗತ್ಯ ಮಾರ್ಗದರ್ಶನ ನೀಡುವ ಉದ್ದೇಶದಿಂದ ತೋಟಗಾರಿಕೆ ಇಲಾಖೆಯು ಒಟ್ಟು 132 ಕಂಟ್ರೋಲ್ ರೂಂ ಹಾಗೂ ಸಹಾಯವಾಣಿ ಆರಂಭಿಸಿದೆ. ಈ ಮೂಲಕ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಎಲ್ಲಾ ಸಿದ್ಧತೆ ಮಾಡಿದ್ದೇವೆ ಎಂದು ರಾಜ್ಯ ಸರ್ಕಾರ ಹೈಕೊರ್ಟ್‌ಗೆ ಮಾಹಿತಿ ನೀಡಿದೆ.
ಲಾಕ್ಡೌನ್ ಅವಧಿಯಲ್ಲಿ ರೈತರಿಗೆ ತಾವು ಬೆಳೆದ ಬೆಳೆಗಳ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ಲಭ್ಯವಾಗದೆ ನಷ್ಟ ಉಂಟಾಗುತ್ತಿರುವುದನ್ನು ತಪ್ಪಿಸಲು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರಿ ವಕೀಲರು ಈ ಕುರಿತು ಲಿಖಿತ ಮಾಹಿತಿ ನೀಡಿದ್ದಾರೆ. ಅದರಂತೆ, ತೋಟಗಾರಿಕೆ ಇಲಾಖೆ 132 ಕಂಟ್ರೋಲ್ ರೂಂಗಳು ಹಾಗೂ ಸಹಾಯವಾಣಿ ಆರಂಭಿಸಿದೆ. ರಾಜ್ಯದ 30 ಜಿಲ್ಲೆಗಳಿಂದ ಈವರೆಗೆ 14,196 ದೂರವಾಣಿ ಕರೆಗಳನ್ನು ಸ್ವೀಕರಿಸಲಾಗಿದೆ. ಆ ಪೈಕಿ 12,892 ರೈತರ ಕರೆಗಳನ್ನು ಪರಿಶೀಲಿಸಿ, ಅವರ ತೋಟಗಾರಿಕಾ ಉತ್ಪನ್ನಗಳ ಮಾರಾಟಕ್ಕೆ ಸೂಕ್ತ ಮಾರ್ಗದರ್ಶನ ನೀಡಲಾಗಿದೆ.
ಇನ್ನು ಹಾಪ್ಕಾಮ್ಸ್ನ 302 ವಾಹನಗಳು, ರೈತ ಉತ್ಪನ್ನ ಸಂಘಗಳ 114 ವಾಹನಗಳು, ಎನ್‌ಜಿಓಗಳ 193 ವಾಹನಗಳು ಹಾಗೂ ಇತರೆ ಸಂಘಟನೆಗಳ ವಾಹನಗಳು ರಾಜ್ಯಾದ್ಯಂತ ತರಕಾರಿ ಮತ್ತು ಹಣ್ಣುಗಳನ್ನು ಸರಬರಾಜು ಮಾಡುತ್ತಿವೆ. ಇದರಿಂದಾಗಿ ಮಾರ್ಚ್ 23 ರಿಂದ ಏಪ್ರಿಲ್ 12 ವರೆಗೆ 6643 ಮೆಟ್ರಿಕ್ ಟನ್ ಹಣ್ಣು ಹಾಗೂ ತರಕಾರಿ ಮಾರಾಟ ಮಾಡಲಾಗಿದೆ. ಅಲ್ಲದೆ, ಎಪಿಎಂಸಿ, ಸಗಟು ಹಾಗೂ ಚಿಲ್ಲರೆ ವ್ಯಾಪಾರಿಗಳು, ಡೀಲರ್‌ಗಳು ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸೇರಿಸಿ ರಾಜ್ಯದ ಜಿಲ್ಲಾಡಳಿತ ಒಟ್ಟು 408 ಸಭೆಗಳನ್ನು ನಡೆಸಿದೆ. ರೈತರ ಬೆಳೆಗಳ ಸರಬರಾಜು ಹಾಗೂ ಮಾರಾಟದ ಕುರಿತು ಈ ಸಭೆಯಲ್ಲಿ ಚರ್ಚಿಸಿ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ದಿನಸಿ, ಹಾಲು, ತರಕಾರಿ, ಹಣ್ಣುಗಳ ಸರಬರಾಜು ನಿರ್ವಹಣೆ ಮಾಡಲು ರಾಜ್ಯ ಮಟ್ಟದ ‘ಸರಬರಾಜು ಸರಪಳಿ ನಿರ್ವಹಣಾ ಕಾರ್ಯಪಡೆ’ಯನ್ನು ಸ್ಥಾಪಿಸಲಾಗಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.