ಬೆಂಗಳೂರು: ಲಾಕ್ಡೌನ್ನಿಂದಾಗಿ ಇದುವರೆಗೂ ನಿಷೇಧವಾಗಿದ್ದ ಮದ್ಯ ಮಾರಾಟಕ್ಕೆ ಸುಮಾರು 42 ದಿನಗಳ ನಂತರ ರಾಜ್ಯ ಸರ್ಕಾರ ಅಸ್ತು ಎಂದಿದ್ದು, ಮದ್ಯ ಇಲ್ಲದೆ ಕಂಗಾಲಾಗಿದ್ದ ಮದ್ಯಪ್ರಿಯರಿಗೆ ಸ್ವರ್ಗವೇ ಸಿಕ್ಕಂತಾಗಿದೆ. ಮೊದಲ ದಿನವೇ ಸುಮಾರು 45 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ.
ಆದರೆ ಸರ್ಕಾರ ಮಾತ್ರ ಸಾರ್ವಜನಿಕರು ಹಾಗೂ ಪ್ರತಿಪಕ್ಷಗಳ ಟೀಕೆಗೆ ಸಿಲುಕಿದೆ. ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಮತ್ತು ಕೆಲವು ನಿಯಮಗಳನ್ನು ವಿಧಿಸುವ ಮೂಲಕ ಆದಾಯ ಗಳಿಕೆಯ ದೃಷ್ಟಿಯಿಂದ ಇತರ ಎಲ್ಲಾ ಕಡೆ ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಮದ್ಯ ಮಾರಾಟವನ್ನು ಆರ್ಥಿಕ ದೃಷ್ಟಿಯಿಂದ ಮಾತ್ರ ಸರ್ಕಾರ ಪರಿಗಣಿಸುತ್ತಿದೆ. ಆದರೆ ಇದರಿಂದ ಸಮಾಜದಲ್ಲಿ ಎದುರಾಗುವ ಅನಾಹುತಗಳು, ಬಡತನ, ಕೌಟುಂಬಿಕ ಕಲಹ, ಅಪರಾಧ ಪ್ರಕರಣಗಳ ಹೆಚ್ಚಳ, ಅಪಘಾತಗಳ ಸಂಖ್ಯೆ ಹೆಚ್ಚಾಗಲಿದೆ ಎನ್ನುತ್ತಿದ್ಧಾರೆ ತಜ್ಞರು. ಅಲ್ಲದೆ ಪ್ರಮುಖ ಆದಾಯದ ಮೂಲವಾಗಿರುವ ಮದ್ಯ ಮಾರಾಟವನ್ನು ಸಂಪೂರ್ಣ ಸ್ಥಗಿತಗೊಳಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ಆದರೆ ಮದ್ಯವ್ಯಸನಿಗಳ ಆರೋಗ್ಯ ರಕ್ಷಣೆ ಮತ್ತು ಅವರ ಕುಟುಂಬದ ನಿರ್ವಹಣೆಗೆ ವಿವಿಧ ಯೋಜನೆಗಳ ಮೂಲಕ ಸುಮಾರು 40 ಸಾವಿರ ಕೋಟಿ ರೂಪಾಯಿ ಹಣವನ್ನು ವೆಚ್ಚ ಮಾಡುತ್ತಿದೆ ಎಂದು ಸರ್ಕಾರ ಟೀಕೆಗೆ ಒಳಗಾಗಿದೆ.
ಇಷ್ಟು ದಿನಗಳ ಕಾಲ ಕೆಲಸವಿಲ್ಲ, ಕೈಯ್ಯಲ್ಲಿ ಕಾಸಿಲ್ಲ, ಬಡತನವಿದೆ, ಒಂದೊತ್ತಿನ ಊಟಕ್ಕೂ ಗತಿಯಿಲ್ಲ. ರೇಷನ್ ಕೊಡಿ, ಮಕ್ಕಳಿಗೆ ಹಾಲು ಕೊಡಿ ಎಂದು ಗೋಗರೆಯುತ್ತಿದ್ದ ಬಹಳಷ್ಟು ಜನರು ದಿಢೀರನೆ ನಿನ್ನೆಯಿಂದ ಮದ್ಯದಂಗಡಿಗಳ ಮುಂದೆ ಹಣ ಹಿಡಿದು ಸಾಲಿನಲ್ಲಿ ನಿಂತಿದ್ದರು. ಸರ್ಕಾರ ಇದುವರೆಗೂ ಉಚಿತವಾಗಿ ಹಾಲು, ದಿನಸಿ ಕೊಟ್ಟಿದೆ. ಸ್ವಯಂಸೇವಾ ಸಂಸ್ಥೆಯವರು ಹಸಿದವರಿಗೆ ಅನ್ನ, ಆಹಾರ ಪದಾರ್ಥಗಳನ್ನು ನೀಡಿದ್ದಾರೆ. ಲಾಕ್ಡೌನ್ ಸಡಿಲಗೊಂಡು ಮದ್ಯದಂಗಡಿ ತೆರೆಯುತ್ತಿದ್ದಂತೆ ಬೆಳಗ್ಗಿನಿಂದಲೇ ಮಹಿಳೆಯರು-ಪುರುಷರು ಎನ್ನದೆ ಸಾಲಿನಲ್ಲಿ ನಿಂತು ಹಣ ಕೊಟ್ಟು ಅಗತ್ಯಗಿಂತ ಹೆಚ್ಚು ಮದ್ಯ ಪಡೆಯುತ್ತಿದ್ದದ್ದು ಬಹುತೇಕ ಕಡೆ ಕಂಡು ಬಂದಿದೆ. ಇದನ್ನು ನೋಡಿದರೆ ಇವರಿಗೇಕೆ ಸರ್ಕಾರ ಉಚಿತ ಸೌಲಭ್ಯಗಳನ್ನು ನೀಡಬೇಕು ಎಂಬ ಪ್ರಶ್ನೆ ಮೂಡುವುದು ಸಹಜ.
ಬಡ ಹಾಗೂ ಮಧ್ಯಮ ವರ್ಗದವರನ್ನು ಗುರಿಯಾಗಿಸಿಕೊಂಡು ಸರ್ಕಾರ ಲಾಕ್ಡೌನ್ ಸಂದರ್ಭದಲ್ಲಿ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಒಂದೆಡೆ ಬಿಪಿಎಲ್ ಕಾರ್ಡ್ದಾರರಿಗೆ 2 ತಿಂಗಳ ರೇಷನ್, ಎಪಿಎಲ್ ಕಾರ್ಡ್ದಾರರಿಗೂ ಕೂಡಾ ಕಡಿಮೆ ದರದಲ್ಲಿ ಅಕ್ಕಿ, ಕಾರ್ಮಿಕರಿಗೆ 1 ಸಾವಿರ ಮೌಲ್ಯದ ದಿನಸಿ ಪದಾರ್ಥ, ಜನಧನ್ ಖಾತೆಗೆ ಹಣ ಮಹಿಳೆಯರಿಗೆ ವಿವಿಧ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದ್ದರೆ, ಜನಪ್ರತಿನಿಧಿಗಳು ಪ್ರತ್ಯೇಕವಾಗಿ ವಿವಿಧ ಸೌಲಭ್ಯಗಳನ್ನು ನೀಡಿದ್ದಾರೆ. ಅಲ್ಲದೆ, ಸಂಘ, ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು ಕೂಡಾ ಸಂತ್ರಸ್ತರಿಗೆ ನೆರವು ನೀಡುತ್ತಿದ್ದಾರೆ. ಆದರೆ ಈಗ ಜನರು ಮದ್ಯದ ಅಂಗಡಿಗಳ ಮುಂದೆ ಹಣ ಹಿಡಿದು ನಿಂತಿದ್ದಾರೆ. ಮದ್ಯ ಖರೀದಿಸಲು ಬರುವ ಪ್ರತಿಯೊಬ್ಬರ ಕೈಗೆ ಸರ್ಕಾರ ಶಾಯಿಯಿಂದ ಅಳಿಸದಂತೆ ಗುರುತು ಹಾಕಬೇಕು. ಇಂತಹ ಗುರುತು ಇದ್ದವರಿಗೆ ಸರ್ಕಾರವಾಗಲೀ, ಸಂಘ ಸಂಸ್ಥೆಗಳಾಗಲಿ ಉಚಿತ ಊಟ, ಆಹಾರ ಪದಾರ್ಥಗಳ ಕಿಟ್ ನೀಡಬಾರದು. ಕುಡಿಯಲು ಹಣವಿದ್ದವರಿಗೆ ದಾನ ಏಕೆ ಮಾಡಬೇಕೆಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಮದ್ಯ ನಿಷೇಧಕ್ಕೆ ಒತ್ತಾಯ
ಲಾಕ್ಡೌನ್ನಿಂದ ಸುಮಾರು ಒಂದು ತಿಂಗಳಿಗಿಂತಲೂ ಹೆಚ್ಚು ದಿನಗಳ ಕಾಲ ಮದ್ಯದಂಗಡಿಗಳನ್ನು ಮುಚ್ಚಲಾಗಿತ್ತು. ಇದೇ ಸರಿಯಾದ ಸಮಯ. ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯ ನಿಷೇಧ ಮಾಡುವಂತೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಅದೇ ರೀತಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಸಾಣೆಹಳ್ಳಿ ಮಠದ ಪೀಠಾಧ್ಯಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಮದ್ಯ ನಿಷೇಧದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡಾ ಮದ್ಯ ಮಾರಾಟ ಆತುರದ ನಿರ್ಧಾರ ಎಂದು ಟ್ವೀಟ್ ಮಾಡಿದ್ದರು. ಕೊರೊನಾ ವೈರಸ್ನಿಂದ ಕುಸಿದಿರುವ ಆರ್ಥಿಕತೆಯನ್ನು ಮದ್ಯ ಮಾರಾಟದ ಮೂಲಕ ಸರಿದೂಗಿಸಲು ಮಾರಾಟಕ್ಕೆ ಅನುಮತಿ ನೀಡಿರುವ ಸರ್ಕಾರ ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.