ಬೆಂಗಳೂರು: ಮೈಸೂರ ಅತ್ಯಾಚಾರ ಪ್ರಕರಣ ಸಂಬಂಧ ಇಂದು ಕೂಡ ವಿಧಾನಸಭೆ ಕಲಾಪದಲ್ಲಿ ಪ್ರತಿಧ್ವನಿಸಿತು. ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯದ ಬಗ್ಗೆ ಪ್ರಸ್ತಾಪಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಲಾಗಿದೆ ಎಂದು ಆರೋಪಿಸಿದರು. ಆಗ ಎದ್ದು ನಿಂತ ಆರೋಗ್ಯ ಸಚಿವ ಸುಧಾಕರ್, ನಾವೇಕೆ ವಿಳಂಬ ಮಾಡಬೇಕು ಎಂದರು. ಈ ವೇಳೆ, ಆಡಳಿತ ಹಾಗೂ ವಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಸದನ ಸಾಕ್ಷಿಯಾಯಿತು.
ಇದಕ್ಕೂ ಮುನ್ನ ಮಾತಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಂತ್ರಸ್ತೆ ಹಾಗೂ ಆಕೆಯ ತಂದೆ ಮಾಹಿತಿ ನೀಡಲು ಸಿದ್ಧರಿರಲಿಲ್ಲ. ಅಂತರವನ್ನು ಮುಂಬೈನಿಂದ ಬೆಂಗಳೂರಿಗೆ ವಾಪಸ್ ಕರೆದುಕೊಂಡು ಬಂದು ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ಕೊಡಿಸುತ್ತಾರೆ. ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದ್ದರು. ಉತ್ತಮ ಕೆಲಸ ಮಾಡಿದ್ದಾರೆ. ಇದಕ್ಕೆ ಆ ಯುವತಿಯ ಹೇಳಿಕೆಯೇ ಸಾಕ್ಷಿ ಎಂದರು.
ಪೊಲೀಸರು ನಿಮ್ಮನ್ನು ಮಿಸ್ ಲೀಡ್ ಮಾಡಿದ್ದಾರೆ: ರಮೇಶ್ ಕುಮಾರ್
ಈ ವೇಳೆ ಮಾತಾನಾಡಿ ರಮೇಶ್ ಕುಮಾರ್, ಎಫ್‌ಐಆರ್ ಅನ್ನು ಸಂತ್ರಸ್ತೆ ಅಥವಾ ಸಂಬಂಧಿಕರೇ ಕೊಡಬೇಕಾಗಿಲ್ಲ. ಎಲ್ಲಿ ಘಟನೆ ನಡೆದಿರುತ್ತೆ. ಯಾರೂ ನೋಡಿ ತಿಳಿಸಿದರೂ ಕೂಡ ಎಫ್‌ಐಆರ್ ದಾಖಲಿಸಬಹುದು. ಯಾರೂ ಹೇಳದಿದ್ದರೂ ಪೊಲೀಸರೇ ಸುಮೋಟೋ ದಾಖಲಿಸಿಕೊಳ್ಳಬಹುದು. ಎಫ್‌ಐಆರ್ ಎಷ್ಟು ಹೊತ್ತಿಗೆ ದಾಖಲಿಸಿಕೊಂಡಿದ್ದರು. ಯಾರಾದರೂ ಹೇಳಿದ ಕೂಡಲೇ ಸುಮೋಟೋ ದಾಖಲಿಸಿಕೊಳ್ಳಲು ಆಗಿಲ್ವಾ ಎಂದು ಪ್ರಶ್ನಿಸಿ, ಪೊಲೀಸರು ನಿಮ್ಮನ್ನು ಮಿಸ್‌ಲೀಡ್ ಮಾಡಿದ್ದಾರೆ ಎಂದರು.
ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿಕೊಟ್ಟಿದ್ದಾರೆ ಸಿಎಂ: ಸದನದಲ್ಲಿ ಕೋಲಾಹಲ
ಘಟನೆ ನಡೆದ ತಕ್ಷಣ ಪೊಲೀಸರು ಕೂಡಲೇ ಅಲ್ಲಿಗೆ ಹೋಗಿದ್ದಾರೆ. ಅವರ ಬಳಿ ಮಾತನಾಡಿ ಯುವಕನ ಹೇಳಿಕೆ ದಾಖಲಿಸಿ ಪ್ರಕರಣ ದಾಖಲಿಸಿದ್ದಾರೆ ಎಂದು ಸಿಎಂ ಹೇಳುತ್ತಿದ್ದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಎದ್ದು ನಿಂತು ಇದು ಸರಿಯಲ್ಲ. ಎಷ್ಟು ಹೊತ್ತಿಗೆ ಯುವಕ ಹೇಳಿಕೆ ನೀಡಿದ್ದು ಎಂದು ಪ್ರಶ್ನಿಸಿದರು.
ಅಲ್ಲದೇ ಮೈಸೂರು ಅತ್ಯಾಚಾರ ಪ್ರಕರಣದ ಎಫ್ಐಆರ್ ಪ್ರತಿಯನ್ನು ಓದಿದರು. ಬಳಿಕ ಇದೇ ವಿಚಾರವಾಗಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ಗದ್ದಲ ಕೋಲಾಹಲಕ್ಕೆ ಕಾರಣವಾಯಿತು. ಕಾಂಗ್ರೆಸ್ ಮಹಿಳಾ ಸದಸ್ಯರು ಸದನದ ಬಾವಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು.