ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 2022-23ನೇ ಸಾಲಿನಿಂದ ಅನ್ವಯವಾಗುವಂತೆ ಪಾಲಿಕೆ (ಬಿಬಿಎಂಪಿ) ಮಾದರಿಯಲ್ಲಿ ಆಸ್ತಿ ತೆರಿಗೆ ಸಂಗ್ರಹ ನಿಯಮಾವಳಿಗಳನ್ನು ಜಾರಿಗೊಳಿಸಿದೆ. ಮುಂದಿನ ಏಪ್ರಿಲ್ 30ರೊಳಗೆ ಆಸ್ತಿ ತೆರಿಗೆ ಪಾವತಿಸಿದವರಿಗೆ ಶೇ.5ರಷ್ಟು ರಿಯಾಯಿತಿ ಈ ನೀತಿಯಿಂದ ದೊರೆಯಲಿದೆ ಎಂದು ಅಭಿವೃದ್ದಿ ಪ್ರಾಧಿಕಾರ ತಿಳಿಸಿದೆ.
ನಗರದಲ್ಲಿ 1976ರಲ್ಲಿ ಅಸ್ತಿತ್ವಕ್ಕೆ ಬಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈವರೆಗೆ 63ಕ್ಕೂ ಅಧಿಕ ಬಡಾವಣೆಗಳು ಹಾಗೂ ನಗರ ನಿರ್ಮಾಣ ಯೋಜನೆಗಳನ್ನು ಕೈಗೊಂಡಿದೆ. ಅಂದಾಜು 46 ವರ್ಷಗಳಿಂದ ಬಿಡಿಎ ನಿರ್ಮಿಸಿದ ಬಡಾವಣೆ ಮತ್ತು ಅದರ ನಿರ್ವಹಣೆಗೆ ಒಳಪಡುವ ಆಸ್ತಿಗಳಿಂದ ಮೊದಲಿನಿಂದಲೂ ಆರ್ಥಿಕ ವರ್ಷದ ಯಾವುದೇ ದಿನವಾದರೂ ಆಸ್ತಿ ತೆರಿಗೆ ಪಾವತಿಸಲು ಅವಕಾಶ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೊದಲು ಆಸ್ತಿ ತೆರಿಗೆ ಮೊತ್ತಕ್ಕೆ ರಿಯಾಯಿತಿ ನೀಡುವ ನಿಯಮವಿರಲಿಲ್ಲ : ಆಸ್ತಿ ತೆರಿಗೆ ಮೊತ್ತಕ್ಕೆ ಯಾವುದೇ ಬಡ್ಡಿ ವಿಧಿಸುವುದಾಗಲಿ ಅಥವಾ ರಿಯಾಯಿತಿ ನೀಡುವ ಪ್ರತೀತಿ ಇರಲಿಲ್ಲ. ಪ್ರಸ್ತುತ 2022-23ನೇ ಸಾಲಿನಿಂದ ಆಸ್ತಿ ತೆರಿಗೆ ಸಂಗ್ರಹ ಪದ್ಧತಿಯಲ್ಲಿ ಹೊಸ ಬದಲಾವಣೆ ತರಲಾಗಿದೆ. ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಜಾರಿಯಲ್ಲಿರುವಂತೆ ಬಿಡಿಎಯಲ್ಲೂ ಆಸ್ತಿ ತೆರಿಗೆ ಪಾವತಿ ನಿಯಮಗಳನ್ನು ಬದಲಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಪಾಲಿಕೆಯ ನಿಯಮಾವಳಿ ಅಳವಡಿಕೆ ಸೂಚಿಸಿದ್ದ ಸರ್ಕಾರ : 2020ರ ಬಿಬಿಎಂಪಿ ಕಾಯ್ದೆಯನ್ನು ಅಳವಡಿಕೆ ಮಾಡಿಕೊಂಡು ಅದರಲ್ಲಿರುವಂತೆ ಆಸ್ತಿ ತೆರಿಗೆ ಸಂಗ್ರಹ ಮಾದರಿಯನ್ನು ಅನುಸರಿಸುವಂತೆ ಬಿಡಿಎಗೆ ಸರ್ಕಾರ ಈ ಮೊದಲು ಸೂಚಿಸಿತ್ತು ಎಂದು ಮಾಹಿತಿ ನೀಡಿದ್ದಾರೆ.
ಹೊಸ ನಿಯಮದೊಂದಿಗೆ ಏಪ್ರಿಲ್ 11ರಿಂದ ಪೋರ್ಟಲ್ ಪುನಾರಂಭ : ಬಿಡಿಎ ವ್ಯಾಪ್ತಿಯಲ್ಲಿ ಒಟ್ಟು 1.05 ಲಕ್ಷ ಸ್ವತ್ತುಗಳಿವೆ. ಈ ಆಸ್ತಿಗಳಿಂದ 30 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಪ್ರಸ್ತುತ 2022-23ನೇ ಸಾಲಿನಲ್ಲಿ ಹೊಸ ಮಾದರಿಯ ಆಸ್ತಿ ತೆರಿಗೆ ಸಂಗ್ರಹ ಪದ್ಧತಿಯನ್ನು ಜಾರಿಗೆ ತರಲಾಗುತ್ತಿದೆ. ಏಪ್ರಿಲ್ 11 ರಿಂದ ಶೇ. 5ರ ರಿಯಾಯಿತಿಯನ್ನು ಅಳವಡಿಸಿಕೊಂಡು ಆಸ್ತಿ ತೆರಿಗೆ ಪಾವತಿ ಪೋರ್ಟಲ್ ಪುನಾರಂಭ ಆಗಲಿದೆ. ಹೊಸ ನಿಯಮದಿಂದ ಈ ವರ್ಷದಲ್ಲಿ 34 ಕೋಟಿ ರೂ. ಆಸ್ತಿ ತರಿಗೆ ಸಂಗ್ರಹದ ಗುರಿಯನ್ನು ಅಭಿವೃದ್ದಿ ಪ್ರಾಧಿಕಾರ ಹೊಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಕೈಗಾರಿಕೆಗಳಿಗೆ ವಿದ್ಯುತ್ ದರದಲ್ಲಿ ರಿಯಾಯಿತಿ: ಸಂತಸ ವ್ಯಕ್ತಪಡಿಸಿದ ಕಾಸಿಯಾ