ಬೆಂಗಳೂರು : ರಾಜ್ಯದಲ್ಲಿ ಮುಂದಿನ ವರ್ಷ ನವೆಂಬರ್ 2-4ರವರೆಗೆ ಬೆಂಗಳೂರಿನಲ್ಲಿ 'ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ'ವನ್ನು ನಡೆಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮತ್ತು ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಸದುದ್ದೇಶದಿಂದ 2022ರ ನವೆಂಬರ್ 2ರಿಂದ ಮೂರು ದಿನಗಳ ಕಾಲ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ.
ಮತ್ತೊಮ್ಮೆ ಸಿಎಂ ಜತೆ ಚರ್ಚಿಸಿ ದಿನಾಂಕವನ್ನು ನಿಗದಿಪಡಿಸಲಾಗುವುದು. ಬಂಡವಾಳ ಹೂಡಿಕೆದಾರರ ಸಮಾವೇಶದಿಂದ ರಾಜ್ಯಕ್ಕೆ ದೇಶ-ವಿದೇಶದಿಂದ ಹೆಚ್ಚಿನ ಬಂಡವಾಳ ಹರಿದು ಬರಲಿದೆ. ಅಲ್ಲದೇ ಉದ್ಯೋಗ ಕ್ರಾಂತಿಯಾಗಿ ಉದ್ಯೋಗ ಸೃಷ್ಟಿಯಾಗಲಿದೆ ಎಂದರು.
ಯಾದಗಿರಿ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಔಷಧಿ ಕಾರ್ಖಾನೆ ತೆರೆಯಲು ತೀರ್ಮಾನಿಸಲಾಗಿದೆ. ಇದಕ್ಕೆ ಕೇಂದ್ರ 1000 ಕೋಟಿ ರೂ. ಅನುದಾನ ನೀಡುತ್ತದೆ. ಇದಕ್ಕಾಗಿ ಮೂರು ರಾಜ್ಯಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದರಲ್ಲಿ ಕರ್ನಾಟಕವೂ ಸಹ ಆರ್ಥಿಕ ನೆರವು ಪಡೆಯಲಿದೆ. ಇದರಿಂದ ಈ ಭಾಗದಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳು ಸಿಗಲಿದೆ ಎಂದರು.
ಈ ಹಿಂದೆ ಲ್ಯಾಂಡ್ ಬ್ಯಾಂಕ್ ಇಲ್ಲದ ಕಾರಣ 2010ರಲ್ಲಿ ನ್ಯಾನೋ ಕಂಪನಿ ರಾಜ್ಯಕ್ಕೆ ಬರಲು ಸಾಧ್ಯವಾಗಲಿಲ್ಲ. ಅಂದು ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಕಂಪನಿ ಮುಖ್ಯಸ್ಥರ ಜತೆ ಮಾತುಕತೆ ನಡೆಸಿದರು. ಸಕಾಲಕ್ಕೆ ಸರಿಯಾಗಿ ಭೂಮಿ ಸಿಗದ ಕಾರಣ ಕಂಪನಿ ಗುಜರಾತಿಗೆ ತೆರಳಬೇಕಾಯಿತು. ಹೀಗಾಗಿಯೇ, ರಾಜ್ಯದಲ್ಲಿ ಲ್ಯಾಂಡ್ ಬ್ಯಾಂಕ್ ಪರಿಕಲ್ಪನೆಯನ್ನು ಜಾರಿಗೆ ತಂದೆವು. ಪರಿಣಾಮ ಅನೇಕ ಕೈಗಾರಿಕೆಗಳು ಸ್ಥಾಪನೆಯಾಗಲು ಸಾಧ್ಯವಾಯಿತು ಎಂದರು.
ಯಾದಗಿರಿ ಜಿಲ್ಲೆ ಕಡೆಚೂರು ಮತ್ತು ಬಾಡಿಯಾಳ ಗ್ರಾಮದಲ್ಲಿ 3,232 ಹಾಗೂ 3,282 ಎಕರೆ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳಲಾಯಿತು. ಇದರಲ್ಲಿ 1600 ಎಕರೆ ಜಮೀನನ್ನು ಅಭಿವೃದ್ಧಿಪಡಿಸಿ ಉದ್ಯಮಿಗಳಿಗೆ ಹಂಚಿಕೆ ಮಾಡಲಾಗಿದೆ. ಕರ್ನಾಟಕದಲ್ಲಿ ಈಗಾಗಲೇ ಕೈಗೆತ್ತಿಕೊಳ್ಳಲಾಗಿರುವ ಚೆನ್ನೈ-ಮುಂಬೈ ಕೈಗಾರಿಕಾ ಕಾರಿಡಾರ್ ತುಮಕೂರು, ಬೆಂಗಳೂರು, ಮುಂಬೈ, ಆರ್ಥಿಕ ಕಾರಿಡಾರ್, ಹೈದರಾಬಾದ್-ಬೆಂಗಳೂರು ಯೋಜನೆಯನ್ನು ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಲಾಗಿದೆ. ಇದರಿಂದ ಕೈಗಾರಿಕಾ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಂಸದೀಯ ಮೌಲ್ಯ ಕಾಪಾಡುವಲ್ಲಿ ನಾವೆಲ್ಲ ಎಷ್ಟು ಯಶಸ್ವಿ ಆಗಿದ್ದೇವೆ ಎಂಬುದರ ಬಗ್ಗೆ ಚಿಂತಿಸಬೇಕಿದೆ : ಸ್ಪೀಕರ್ ಓಂ ಬಿರ್ಲಾ