ಬೆಂಗಳೂರು: ಆನೆ ಸೇರಿದಂತೆ ಕಾಡು ಪ್ರಾಣಿಗಳಿಂದ ಬೆಳೆಹಾನಿಯಾಗಿರುವ ಪ್ರಮಾಣದಷ್ಟೇ ಪರಿಹಾರ ನೀಡುವಂತೆ ಸರ್ಕಾರಕ್ಕೆ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಲಹೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಪ್ರಶ್ನೆಗೆ ಅರಣ್ಯ ಸಚಿವರ ಪರವಾಗಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಉತ್ತರಿಸುತ್ತಿದ್ದ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಕಾಗೇರಿ, ರಾಜ್ಯದೆಲ್ಲೆಡೆ ಆನೆ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿ ಮಿತಿಮೀರಿದೆ. ರೈತರು ಬೆಳೆದ ಬೆಳೆ ಕೈಗೆ ಸಿಗುತ್ತಿಲ್ಲ. ಮಲೆನಾಡಿನಲ್ಲಿ ಕಾಡುಪ್ರಾಣಿ ಹಾವಳಿ ಹೆಚ್ಚಾಗಿದ್ದು, ಹೆಚ್ಚು ಪರಿಹಾರ ಕೊಡಬೇಕು. 10 ಚೀಲದಷ್ಟು ನಷ್ಟವಾಗಿದ್ದರೆ, ಅಷ್ಟೇ ಪ್ರಮಾಣದ ಪರಿಹಾರವನ್ನು ತ್ವರಿತವಾಗಿ ಕೊಡಿ. ರೈತರು ಬೆಳೆ ಕಳೆದುಕೊಂಡು ಹತಾಶರಾಗಿದ್ದಾರೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಶಾಸಕ ಎಂ.ಪಿ.ಕುಮಾರಸ್ವಾಮಿ, ಅತಿವೃಷ್ಟಿ ಹಾಗೂ ಆನೆ ಹಾವಳಿಯಿಂದಾಗಿ 500 ಎಕರೆ ಪ್ರದೇಶ ಪಾಳುಬಿದ್ದಿದೆ. ಆ ಜಮೀನಿಗೂ ಪರಿಹಾರ ಕೊಡಬೇಕೆಂದು ಆಗ್ರಹಿಸಿದರು. ಇದಕ್ಕೆ ಉತ್ತರ ನೀಡಿದ ಸಚಿವ ಬೈರತಿ ಬಸವರಾಜ್, ಕಾಡಾನೆಗಳ ಹಾವಳಿಯಿಂದ ಉಂಟಾದ ಬೆಳೆ ನಷ್ಟಕ್ಕೆ ಪ್ರಸಕ್ತ ಸಾಲಿನಲ್ಲಿ ನವೆಂಬರ್ ಅಂತ್ಯಕ್ಕೆ 224 ಪ್ರಕರಣಗಳಲ್ಲಿ 22,96,009 ರೂ. ಪರಿಹಾರ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 50:50ರ ಅನುಪಾತದಲ್ಲಿ 3,398 ಮೀಟರ್ ಸೋಲಾರ್ ಬೇಲಿಯನ್ನು ರೈತರ ಬೇಡಿಕೆ ಅನುಸಾರ ಮುತ್ತೋಡಿ ವಲಯದಲ್ಲಿ ನಿರ್ಮಿಸಲಾಗಿದೆ. ಚಿಕ್ಕಮಗಳೂರು ವಿಭಾಗ ವ್ಯಾಪ್ತಿಯಲ್ಲಿ ಕಾಡಾನೆ ಸ್ಥಳಾಂತರಿಸುವ ಯೋಜನೆ ಸರ್ಕಾರದ ಮುಂದಿಲ್ಲ ಎಂದು ತಿಳಿಸಿದರು.
ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ರೈತರು, ಕಾರ್ಮಿಕರ ವಿರೋಧಿ ಕಾಯ್ದೆಗಳ ರದ್ದು : ಸಿದ್ದರಾಮಯ್ಯ ಭರವಸೆ
ಆಸ್ಪತ್ರೆ ಮೇಲ್ದರ್ಜೆ ಇಲ್ಲ : ಈ ವರ್ಷ ಯಾವುದೇ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ವಿಧಾನಸಭೆಯಲ್ಲಿ ಶಾಸಕ ಐಹೊಳೆ ಡಿ.ಮಹಾಲಿಂಗಪ್ಪ ಅವರ ಪ್ರಶ್ನೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಪರವಾಗಿ ಉತ್ತರಿಸಿದರು.
ಹೊಸ ವೈದ್ಯಕೀಯ ಕಾಲೇಜುಗಳು ಸ್ಥಾಪನೆಯಾಗುತ್ತಿದ್ದು, ಕೇಂದ್ರಸರ್ಕಾರ ನೀಡುವ ಅನುದಾನಕ್ಕೆ ರಾಜ್ಯ ಸರ್ಕಾರದ ಪಾಲು ನೀಡದಿದ್ದರೆ ತೊಂದರೆಯಾಗುತ್ತದೆ. ಈ ವರ್ಷ ಅನುದಾನದ ಕೊರತೆಯಿದ್ದು, ಮುಂದೆ ಅನುದಾನ ಲಭ್ಯತೆ ಮೇಲೆ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ವಿಚಾರದ ಬಗ್ಗೆ ಪರಿಶೀಲಿಸಬಹುದು ಎಂದರು.
ಶಾಸಕ ಬೆಳ್ಳಿ ಪ್ರಕಾಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಡೂರಿನಲ್ಲಿ ತಾಯಿ ಮತ್ತು ಮಗುವಿನ ಆಸ್ಪತ್ರೆ ಸ್ಥಾಪನೆ ಮಾಡಲು ನಿಯಮಾವಳಿಗಳ ಪ್ರಕಾರ ಸಾಧ್ಯವಿಲ್ಲ. ಖಾಲಿ ಇರುವ ಹುದ್ದೆಗಳನ್ನು ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.