ಶಿವಮೊಗ್ಗ: ದಲಿತ ಮಹಿಳೆಯೊಬ್ಬರು ತನ್ನ ಗಂಡನ ಜೊತೆ ರಾತ್ರಿ ಮನೆಗೆ ಬರುತ್ತಿದ್ದ ವೇಳೆ ನಾಲ್ವರು ಯುವಕರು ಏಕಾಏಕಿ ದಾಳಿ ನಡೆಸಿದ್ದಾರೆ. ಮಹಿಳೆಯನ್ನು ವಿವಸ್ತ್ರಗೊಳಿಸಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತೆ ನೀಡಿದ ದೂರಿನ ವಿವರ: ತೀರ್ಥಹಳ್ಳಿ ತಾಲೂಕಿನ ಗ್ರಾಮವೊಂದರ ನಿವಾಸಿಯಾದ ಮಹಿಳೆಯೊಬ್ಬಳು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಆಕೆ ಗಂಡನೊಡನೆ ತೀರ್ಥಹಳ್ಳಿ ಆಸ್ಪತ್ರೆಗೆ ಹೋಗಿ ರಾತ್ರಿ ಸ್ವಗ್ರಾಮಕ್ಕೆ ವಾಪಸ್ ಆಗುತ್ತಿದ್ದರು. ಈ ಸಂದರ್ಭದಲ್ಲಿ ನಾಲ್ವರು ಯುವಕರು ಅಡ್ಡಗಟ್ಟಿ ಪತಿ ಮೇಲೆ ಹಲ್ಲೆ ನಡೆಸಿದ್ದು, ಅವರು ಮೂರ್ಛೆ ಹೋಗಿ ಕುಸಿದುಬಿದ್ದರು.
ಇದನ್ನೂ ಓದಿ: ಬುಡಕಟ್ಟು ಸಮುದಾಯದ ಮಹಿಳೆ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ ಕಾಮುಕ
ನನ್ನ ಗಂಡ ಮೂರ್ಛೆ ಹೋಗಿ ಬಿದ್ದ ಸಮಯದಲ್ಲಿ ನನಗೆ ಆ ಯುವಕರು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಬಳಿಕ ರಸ್ತೆ ಪಕ್ಕದ ರಬ್ಬರ್ ತೋಟಕ್ಕೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ ವಿವಸ್ತ್ರಗೊಳಿಸಿದರು. ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಯತ್ನವೂ ನಡೆಯಿತು. ನಾನು ಜೋರಾಗಿ ಕೂಗಿಕೊಂಡಾಗ ಗಂಡನಿಗೆ ಪ್ರಜ್ಞೆ ಬಂದಿದೆ. ಕೂಡಲೇ ಅವರು ಸಹಾಯಕ್ಕಾಗಿ ಕಿರುಚಿದರು. ಆಗ ದಾರಿಯಲ್ಲಿ ಹೋಗುವವರಿಬ್ಬರು ನಮ್ಮ ಸಹಾಯಕ್ಕೆ ದೌಡಾಯಿಸಿದ್ದಾರೆ.
ನಮ್ಮ ಸಹಾಯಕ್ಕೆ ದೌಡಾಯಿಸಿದ್ದ ಗ್ರಾಮಸ್ಥರು ನಮ್ಮನ್ನು ಆಟೋದಲ್ಲಿ ಮನೆಗೆ ಕಳುಹಿಸಿಕೊಟ್ಟರು. ಹಲ್ಲೆಯಿಂದಾದ ಗಾಯದಿಂದ ಬಳಲುತ್ತಿದ್ದ ನಮ್ಮನ್ನು ಸಂಬಂಧಿಕರು ಮರುದಿನ ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಿಂದ ಚೇತರಿಸಿಕೊಂಡ ಬಳಿಕ ಪೊಲೀಸರಿಗೆ ದೂರು ನೀಡಿದ್ದೇವೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸಂತ್ರಸ್ತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮದುವೆ ಕಾರ್ಡ್ ಹಂಚಲು ತೆರಳಿದ್ದ ವಧು ಕಿಡ್ನ್ಯಾಪ್, ಸಾಮೂಹಿಕ ಅತ್ಯಾಚಾರ.. 20 ದಿನದ ಬಳಿಕ ಪೋಷಕರ ಮಡಿಲು ಸೇರಿದ ಸಂತ್ರಸ್ತೆ!
ಈ ಕುರಿತು ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ತಂಡ ರಚಿಸಿದ್ದೇವೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುವುದಾಗಿ ಶಿವಮೊಗ್ಗ ಎಸ್ಪಿ ಲಕ್ಷ್ಮೀಪ್ರಸಾದ್ ತಿಳಿಸಿದರು.