ಬೆಂಗಳೂರು: ಜಿ ಕೆಟಗರಿ ನಿವೇಶನ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನಿವೇಶನಗಳ ಹಂಚಿಕೆಯ ಕಾನೂನು ಬದ್ಧತೆಯನ್ನು ಪರಿಶೀಲಿಸುತ್ತಿರುವ ನಿವೃತ್ತ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರ ಕುಮಾರ್ ನೇತೃತ್ವದ ಸಮಿತಿಗೆ ಮತ್ತೆ 27ಕ್ಕೂ ನಿವೇಶನಗಳ ಪರಿಶೀಲನೆ ಕಾರ್ಯವನ್ನು ಒಪ್ಪಿಸಲು ಹೈಕೋರ್ಟ್ ಸಮ್ಮತಿಸಿದೆ.
ಈ ಕುರಿತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಬಿಡಿಎ ವಕೀಲರು ಪೀಠಕ್ಕೆ ಮನವಿ ಮಾಡಿ, ಹೈಕೋರ್ಟ್ ನಿರ್ದೇಶನದಂತೆ ನ್ಯಾ.ಶೈಲೇಂದ್ರ ಕುಮಾರ್ ನೇತೃತ್ವದ ಸಮಿತಿ 800ಕ್ಕೂ ಅಧಿಕ ಮಂದಿಯ ನಿವೇಶನ ಹಂಚಿಕೆ ಪರಿಶೀಲಿಸುತ್ತಿದೆ. ಇದೀಗ ಮತ್ತೆ 27 ಮಂದಿಯ ನಿವೇಶನ ಹಂಚಿಕೆ ಕಾರ್ಯವನ್ನೂ ಸಹ ಅದೇ ಸಮಿತಿಗೆ ಒಪ್ಪಿಸಬೇಕು ಎಂದು ಬಿಡಿಎ ಸಲ್ಲಿಸಿರುವ ಮಧ್ಯಂತರ ಮನವಿಯನ್ನು ಪುರಸ್ಕರಿಸಬೇಕು ಎಂದು ಕೋರಿದರು.
ಇದಕ್ಕೆ ಸಮ್ಮತಿಸಿದ ಪೀಠ ಬಿಡಿಎ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಮಾನ್ಯ ಮಾಡಿತು. ಆದರೆ, ಮೂಲ ಅರ್ಜಿಯ ಕುರಿತು ಅಂತಿಮ ವಿಚಾರಣೆ ನಡೆಸಿ ಇತ್ಯರ್ಥ ಪಡಿಸಲಾಗುವುದು ಎಂದು ಸ್ಪಷ್ಟಪಡಿಸಿತು. ಇದೇ ವೇಳೆ, ವಕೀಲರೊಬ್ಬರು, ತಮ್ಮ ಕಕ್ಷಿದಾರರೊಬ್ಬರು ಜಿ ಕೆಟಗರಿ ಅಡಿ ಪಡೆದಿದ್ದ ನಿವೇಶನವನ್ನು ಖರೀದಿಸಿದ್ದಾರೆ. ಹಾಗಾಗಿ ಅದಕ್ಕೆ ಪರಿಶೀಲನೆಯಿಂದ ವಿನಾಯಿತಿ ನೀಡಬೇಕೆಂದು ಕೋರಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಡಿಎ ಪರ ವಕೀಲರು, ಈ ವಿಚಾರವನ್ನೂ ಸಹ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕು ಎಂದು ಪೀಠವನ್ನು ಕೋರಿದರು.
ಜತೆಗೆ, ಇನ್ನೂ ಕೆಲವು ನಿವೇಶನ ಹಂಚಿಕೆದಾರರು ನಾನಾ ವಿಚಾರಗಳನ್ನು ಮುಂದಿಟ್ಟುಕೊಂಡು ಮಧ್ಯಂತರ ಅರ್ಜಿ ಸಲ್ಲಿಸಿದ್ದು, ಅವುಗಳನ್ನು ಅಂತಿಮ ವಿಚಾರಣೆ ವೇಳೆ ಪರಿಗಣಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು. ವಕೀಲ ಎಸ್. ವಾಸುದೇವ್ 2012ರಲ್ಲಿ ಜಿ ಕೆಟಗರಿ ನಿವೇಶನ ಹಂಚಿಕೆ ಕಾನೂನು ಬಾಹಿರ, ನಿವೇಶನ ಇದ್ದವರಿಗೆ, ಶ್ರೀಮಂತರಿಗೆ ನಿವೇಶನ ನೀಡಲಾಗುತ್ತಿದೆ ಎಂದು ಆರೋಪಿಸಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದರು. ಈ ಬಗ್ಗೆ ಸಮಗ್ರ ವಿಚಾರಣೆ ನಡೆಸಿದ್ದ ಹೈಕೋರ್ಟ್ ಎಲ್ಲ ಜಿ ಕೆಟಗರಿ ನಿವೇಶನಗಳ ಹಂಚಿಕೆಯ ಕಾನೂನು ಬದ್ಧತೆಯನ್ನು ಪರಿಶೀಲಿಸಲು ಆದೇಶಿಸಿತ್ತು.
ಇದನ್ನೂ ಓದಿ: ವಿಶೇಷ ಆಶ್ರಯ ಯೋಜನೆ ಅಡಿ ನಿವೇಶನ ಹಂಚಿಕೆಗೆ ವಿಳಂಬ : ಸರ್ಕಾರದ ವಿರುದ್ಧ ಹೈಕೋರ್ಟ್ ಗರಂ