ಬೆಂಗಳೂರು: ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್ಎಸ್ಎಲ್) ಕೆಲಸ ಮಾಡುತ್ತಿದ್ದ ಹೋಮ್ ಗಾರ್ಡ್ ಸೇರಿ ಇಬ್ಬರು ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ಈವರೆಗೂ ಒಟ್ಟು ನಾಲ್ಕು ಸಿಬ್ಬಂದಿಗೆ ಸೋಂಕು ವಕ್ಕರಿಸಿದೆ.
ಕೆಲ ದಿನಗಳ ಹಿಂದೆ ಇಬ್ಬರು ಸಿಬ್ಬಂದಿಗೆ ಕೊರೊನಾ ಕಾಣಿಸಿದ ಪರಿಣಾಮ ಕಚೇರಿಗೆ ಸ್ಯಾನಿಟೈಸ್ ಮಾಡಿ ಸೀಲ್‌ಡೌನ್ ಮಾಡಲಾಗಿತ್ತು. ತೆರವು ಬಳಿಕ ಎಂದಿನಂತೆ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಸದ್ಯ ಮತ್ತಿಬ್ಬರಲ್ಲಿ ಕೋವಿಡ್-19 ಕಾಣಿಸಿರುವುದು ಸ್ವ್ಯಾಬ್ ಪರೀಕ್ಷೆಯಲ್ಲಿ ಬಹಿರಂಗವಾಗಿದೆ.
ವಿಧಿವಿಜ್ಞಾನ ಪ್ರಯೋಗಾಲಯ ಕೇಂದ್ರದಲ್ಲಿ ಒಟ್ಟು 120ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಾರೆ. ರಾಜ್ಯದ ಮೂಲೆ ಮೂಲೆಗಳಿಂದ ಪ್ರಕರಣ, ತನಿಖೆ, ವಿಚಾರಣೆ ಹೆಸರಲ್ಲಿ ಅನೇಕ ಜನ ಬಂದು ಹೋಗುತ್ತಾರೆ. ಇದರಿಂದ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕಿತರ ಸಂಪರ್ಕದಲ್ಲಿರುವ ಅನೇಕ ಜನರಿಗೆ ಕ್ವಾರಂಟೈನ್ ಮಾಡಲಾಗಿತ್ತು. ಆದರೂ ಇಂದು ಇಬ್ಬರು ಸಿಬ್ಬಂದಿಗೆ ಸೋಂಕು ಕಾಣಿಸಿದೆ.