ಬೆಂಗಳೂರು: ಗುರುವಿಗೆ ಗುರು ನಮನ ಸಲ್ಲಿಸುವ ಉದ್ದೇಶದಿಂದ ಸ್ಪರ್ಶ್ ಆಸ್ಪತ್ರೆಯು 9ನೇ ಆವೃತ್ತಿಯ ಉಚಿತ ಮಂಡಿ ಕೀಲು ಜೋಡಣೆ ಶಸ್ತ್ರಚಿಕಿತ್ಸೆ ನಡೆಸಲು ಸಜ್ಜಾಗಿದೆ.
ಶಿಕ್ಷಕರು ಗಂಟೆಗಳ ಕಾಲ ನಿಂತುಕೊಂಡೆ ಪಾಠ ಬೋಧಿಸಬೇಕಾಗುತ್ತದೆ. ಹೀಗಾಗಿ ಅವರಿಗೆ ಸಂಧಿವಾತ ಬರುವುದು ಸಾಮಾನ್ಯ. ಈ ನಿಟ್ಟಿನಲ್ಲಿ ನಿವೃತ್ತ ಶಿಕ್ಷಕರಿಗೆ ಗೌರವ ನೀಡುವ ಸಲುವಾಗಿ 6 ಜಿಲ್ಲೆಗಳಲ್ಲಿ 100 ಮಂದಿಗೆ ಈ ಶಸ್ತ್ರಚಿಕಿತ್ಸೆ ನೀಡಲು ಮುಂದಾಗಿದೆ.
ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಚೇರ್ಮನ್ ಡಾ.ಶರಣ್ ಪಾಟೀಲ್ ಅವರು ಈ ಕುರಿತು ಮಾಹಿತಿ ನೀಡಿದರು. ಸ್ಪರ್ಶ್ ಫೌಂಡೇಶನ್ನಿಂದ ನಿವೃತ್ತ ಶಿಕ್ಷಕರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಹಾಸನದಲ್ಲಿ ಆಗಸ್ಟ್ 29ರಂದು ಆರಂಭವಾಗುತ್ತಿದ್ದು, ಉಚಿತ ಶಸ್ತ್ರಚಿಕಿತ್ಸೆ ಮತ್ತು ಶಸ್ತ್ರಕ್ರಿಯಾನಂತರ ಆರೈಕೆಯನ್ನೂ ಮಾಡಲಾಗುವುದು ಎಂದು ಹೇಳಿದರು.
ಹಾಸನ, ದಾವಣಗೆರೆ, ಗುಲ್ಬರ್ಗಾ, ರಾಯಚೂರು, ಬಿಜಾಪುರ, ಬೆಂಗಳೂರಿನಲ್ಲಿ ಶಿಬಿರ ನಡೆಯಲಿದೆ.
ನಿವೃತ್ತ ಶಿಕ್ಷಕರು ಮಾಡಬೇಕಾದದ್ದು ಏನು?
ರಾಜ್ಯದ ಎಲ್ಲಾ ನಿವೃತ್ತ ಶಿಕ್ಷಕರು ಈ ಚಿಕಿತ್ಸೆಗೆ ಅರ್ಹರಾಗಿರುತ್ತಾರೆ. 080-61222000 ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ ನೋಂದಣಿ ಮಾಡಿಕೊಳ್ಳಬೇಕು. ಗುರುತಿನ ಚೀಟಿ ತರಬೇಕು. ತಮ್ಮ ಹಿಂದಿನ ವೈದ್ಯಕೀಯ ದಾಖಲೆ ನೀಡಿ ಚಿಕಿತ್ಸೆ ಪಡೆಯಬಹುದು. ಅಗತ್ಯ ಪರೀಕ್ಷೆಯ ನಂತರ ರೋಗಿಗಳ ಅನುಕೂಲಕ್ಕೆ ತಕ್ಕಂತೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ.