ಬೆಂಗಳೂರು: ವಿದೇಶಿ ಕರೆನ್ಸಿ ವಿನಿಮಯ ಹೆಸರಲ್ಲಿ ನೂರಾರು ಜನರಿಗೆ ಕೋಟ್ಯಂತರ ರೂ. ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ಆರೋಪಿ ಕೃಷ್ಣೇಗೌಡನನ್ನು ಸಿಸಿಬಿ ಪೊಲೀಸರು ಬಂಧಿಸಿದ ಬೆನ್ನಲ್ಲೇ ಹಣ ಕಳೆದುಕೊಂಡವರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ನೀಡುತ್ತಿದ್ದಾರೆ.
ಕೃಷ್ಣೇಗೌಡನ ವಿರುದ್ಧ ಹಣ ಕಳೆದುಕೊಂಡ ಕೆಂಚಪ್ಪಗೌಡ ಎಂಬುವರು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಹಿಂದೆ ಹನುಮಂತನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕೆಂಚಪ್ಪಗೌಡ ಅವರು ₹ 60 ಲಕ್ಷ ಹಣ ಕಳೆದುಕೊಂಡಿದ್ದಾರಂತೆ. ಕೆಂಚಪ್ಪಗೌಡ ಅವರಿಗೆ ಸ್ನೇಹಿತರೊಬ್ಬರ ಮೂಲಕ ಆರೋಪಿ ಪರಿಚಯವಾಗಿದ್ದ. ವಿದೇಶದಲ್ಲಿ ತನಗೆ ಸೇರಿರುವ ಅಪಾರ ಹಣವನ್ನ ಪಡೆಯಲು ಶುಲ್ಕ ಪಾವತಿಸಬೇಕು. ನೀವು ಕೊಡುವ ಹಣಕ್ಕಿಂತಲೂ ಅಧಿಕ ಹಣ ನೀಡುವುದಾಗಿ ಹೇಳಿದ್ದನಂತೆ. ಹಣದಾಸೆಗೆ ಕೆಂಚಪ್ಪ ಹೆಚ್ಡಿಎಫ್ಸಿ ಬ್ಯಾಂಕ್ನಿಂದ ₹ 60 ಲಕ್ಷ ಸಾಲ ಪಡೆದಿದ್ದರು.
ಹಣ ಪಡೆದ ಬಳಿಕ ಮೂರು ತಿಂಗಳಾದರೂ ಹಣ ಮರಳಿಸಿರಲಿಲ್ಲ. ಎಂ.ಜಿ. ರಸ್ತೆಯಲ್ಲಿ ಬ್ಲ್ಯಾಕ್ ಡೆಲಿಗೇಟ್ಸ್ ಹೆಸರಿನಲ್ಲಿ ಕಚೇರಿ ತೆರೆದಿದ್ದ ಕೃಷ್ಣೇಗೌಡ, ಉದ್ಯಮಿಗಳು, ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಿಗೆ ಕೋಟ್ಯಂತರ ರೂ. ಪಂಗನಾಮ ಹಾಕಿದ್ದಾನೆ. ಸದ್ಯ ಸಿಸಿಬಿ ಪೊಲೀಸರು ಈತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.