ಬೆಂಗಳೂರು: ಇಂದಿನಿಂದ ನಗರದಲ್ಲಿ ನಾಲ್ಕನೇ ಹಂತದ ಕೋವಿಡ್ ವ್ಯಾಕ್ಸಿನ್ ವಿತರಣೆ ಆರಂಭವಾಗಿದೆ. ನಗರದ ಪ್ರಮುಖ ಸಾರ್ವಜನಿಕ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು ಹಾಗೂ ಮೆಡಿಕಲ್-ನರ್ಸಿಂಗ್ ಕಾಲೇಜುಗಳಲ್ಲಿ 45 ವರ್ಷ ಮೀರಿದ ನಾಗರಿಕರಿಗೆ ಲಸಿಕೆ ನೀಡಲಾಗುತ್ತಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಂದು ಮಕ್ಕಳ ಲಸಿಕೆ ವಿತರಣೆ ಇರುವುದರಿಂದ ಕೋವಿಡ್ ಲಸಿಕೆ ನೀಡಲಾಗುತ್ತಿಲ್ಲ. ಸೋಮವಾರ, ಬುಧವಾರ, ಶುಕ್ರವಾರ, ಭಾನುವಾರ ಹೀಗೆ ವಾರದ ನಾಲ್ಕು ದಿನ ಮಾತ್ರ ಪಾಲಿಕೆ ಆಸ್ಪತ್ರೆಗಳಲ್ಲಿ ಲಸಿಕೆ ದೊರೆಯುತ್ತಿದೆ.
ಕೆ.ಸಿ.ಜನರಲ್ ಆಸ್ಪತ್ರೆಯ ಕೋವಿಡ್ ನೋಡಲ್ ಅಧಿಕಾರಿ ಡಾ.ಲಕ್ಷ್ಮೀಪತಿ ಮಾತನಾಡಿ, ಈ ಬಾರಿ ಹೆಚ್ಚಿನ ಜನರು ಬರುವ ನಿರೀಕ್ಷೆ ಇರುವುದರಿಂದ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ. ಜನರು ಉತ್ಸಾಹದಿಂದ ಬರುತ್ತಿದ್ದಾರೆ. ಎರಡು ಗಂಟೆಯಲ್ಲೇ 150 ಜನರು ಬಂದಿದ್ದಾರೆ. ಸಂಜೆ 4 ಗಂಟೆಯವರೆಗೂ ಲಸಿಕೆ ವಿತರಣೆ ನಡೆಯಲಿದೆ ಎಂದರು.
ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡೂ ತರದ ಲಸಿಕೆ ಲಭ್ಯವಿದೆ. ವ್ಯಾಕ್ಸಿನ್ ಪಡೆದ ನಂತರ ಅಥವಾ ಮೊದಲು ಯಾವುದೇ ರೀತಿ ಆಹಾರ ಕ್ರಮದಲ್ಲಿ, ಜೀವನ ಕ್ರಮದಲ್ಲಿ ವ್ಯತ್ಯಾಸ ಮಾಡಬೇಕಾಗಿಲ್ಲ. ನೂರರಲ್ಲಿ ಹತ್ತು ಜನರಿಗಷ್ಟೇ ಸಣ್ಣದಾಗಿ ಜ್ವರ, ಮೈ ಕೈ ನೋವು ಬಂದಿದೆ. ಅವರು ಜ್ವರದ ಮಾತ್ರೆ ತಿಂದರೆ ಸರಿಹೋಗುತ್ತಾರೆ. ಕಳೆದ ಒಂದೂವರೆ ತಿಂಗಳಲ್ಲಿ 7,500 ಜನರಿಗೆ ವ್ಯಾಕ್ಸಿನ್ ನೀಡಿದ್ದು ಯಾರಿಗೂ ಅಡ್ಡಪರಿಣಾಮ ಕಂಡುಬಂದಿಲ್ಲ ಎಂದು ವಿವರಿಸಿದರು.