ಬೆಂಗಳೂರು: ದೆಹಲಿಯ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಏಕೈಕ ಕನ್ನಡಿಗ, ಮಣ್ಣಿನ ಮಗ, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಇಂದು 88ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಕೋವಿಡ್ನಿಂದಾಗಿ ದೇವೇಗೌಡರು ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸದೆ ಸರಳವಾಗಿ ಮನೆಯಲ್ಲೇ ಕುಟುಂಬ ಸದಸ್ಯರ ಜೊತೆ ಆಚರಿಸಿಕೊಂಡಿದ್ದಾರೆ. ಪತ್ನಿ ಚೆನ್ನಮ್ಮ, ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.
ತಮ್ಮ ಮನೆಯ ಬಳಿಗೆ ಬಂದು ಹುಟ್ಟುಹಬ್ಬ ಆಚರಿಸಬಾರದು. ನೀವು ಮನೆಗಳಲ್ಲಿಯೇ ಇದ್ದು, ಅಲ್ಲಿಂದಲೇ ಶುಭಾಶಯ ತಿಳಿಸಿ ಎಂದು ಅಭಿಮಾನಿಗಳು ಹಾಗೂ ಕಾರ್ಯಕರ್ತರಿಗೆ ದೇವೇಗೌಡರು ಮನವಿ ಮಾಡಿದ್ದಾರೆ. ಹಾಗಾಗಿ ಪಕ್ಷದ ನಾಯಕರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ದೇವೇಗೌಡರಿಗೆ ತಾವು ಇರುವಲ್ಲಿಂದಲೇ ಶುಭಾಶಯ ಕೋರಿದ್ದಾರೆ.
ಆಗಲೂ ಅದೇ, ಈಗಲೂ ಅದೇ ಸಾಧಾರಣ ಬಿಳಿ ಶರ್ಟ್, ಪಂಚೆ, ಹೆಗಲ ಮೇಲೆ ಬಳಿ ಟವಲ್. ಅಪಾರ ಚಿಂತನೆಯುಳ್ಳ ಏಕೈಕ ರಾಜಕಾರಣಿ. ಅವರ ಅಧಿಕಾರದ ಅವಧಿಯಲ್ಲಿ ದೇಶಕ್ಕೆ ಕೊಟ್ಟ ಕೊಡುಗೆ ಅಪಾರ. ಈ ಬಗ್ಗೆ ಜೆಡಿಎಸ್ ಸೇವಾದಳದ ರಾಜ್ಯ ಉಪಾಧ್ಯಕ್ಷ ಸಿ.ಕೆ.ರಾಕೇಶ್ ಗೌಡ, ಗೌಡರನ್ನು ಸ್ಮರಿಸಿಕೊಂಡಿದ್ದು ಹೀಗೆ...
ಪ್ರಥಮವಾಗಿ ಮಾಡಿದ್ದ ಆಲಮಟ್ಟಿ ಡ್ಯಾಮ್ನ ಎತ್ತರವನ್ನು ಚಂದ್ರಬಾಬು ನಾಯ್ಡು ವಿರೋಧದ ನಡುವೆಯೂ 524 ಮೀಟರಿಗೆ ಏರಿಸುವ ವಿನ್ಯಾಸಕ್ಕೆ ಅಂಗೀಕಾರ ನೀಡಿದ್ದು ದೇವೇಗೌಡರು. ರಾಜ್ಯಗಳ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಸಹಾಯಧನ ನೀಡಬಾರದೆನ್ನುವ 'ಗಾಡೀಲ್ ಫಾರ್ಮುಲಾ'ವನ್ನು ಮಾರ್ಪಡಿಸಿ ಆಲಮಟ್ಟಿಯಂತಹ ಯೋಜನೆಗಳಿಗೆ ಸಾವಿರ ಕೋಟಿ ಅನುದಾನ ನೀಡಿದರು.
ವಿರೋಧದ ನಡುವೆಯೂ ಕಾವೇರಿ ನೀರು ತಂದರು...
ನಷ್ಟದಲ್ಲಿದ್ದ ವಿಶ್ವೇಶ್ವರಯ್ಯ ಅವರ ಕನಸಿನ ಕೂಸಾದ ಭದ್ರಾವತಿ ಉಕ್ಕು ಕಾರ್ಖಾನೆಗೆ ಬೀಗ ಮುದ್ರೆ ತಪ್ಪಿಸಲು ₹ 600 ಕೋಟಿ ಅನುದಾನ ನೀಡಿ 'ಸೀಲ್ ಅಥಾರಿಟಿ ಆಫ್ ಇಂಡಿಯಾ'ದ ಸುರ್ಪದಿಗೆ ಒಪ್ಪಿಸಿದರು. ಬೆಂಗಳೂರು ಮತ್ತು ಮೈಸೂರುಗಳಲ್ಲಿ ನ್ಯಾಷನಲ್ ಗೇಮ್ ವಿಲೇಜ್ ಸ್ಥಾಪಿಸಿ ನ್ಯಾಷನಲ್ ಗೇಮ್ ನಡೆಸಿದರು. ಬೆಂಗಳೂರಿನ ಎಲ್ಲಾ ಭಾಗಕ್ಕೂ ಕುಡಿಯುವ ನೀರಿನ ಅವಶ್ಯಕತೆ ಇರುವುದನ್ನು ಮನಗಂಡಿದ್ದ ಗೌಡರು, ತಮಿಳುನಾಡಿನ ವಿರೋಧದ ನಡುವೆಯೂ 9 ಟಿಎಂಸಿ ನೀರು ಸಿಗುವಂತೆ ಮಾಡಿದರು. ಅದನ್ನೇ ಬೆಂಗಳೂರಿನ ಹೊರವಲಯದ ಜನ ಈಗ ಕುಡಿಯುತ್ತಿರುವುದು.
ಬೆಂಗಳೂರಿನ ಬೆಳವಣಿಗೆಗೆ ರಸ್ತೆಗಳ ವಿಸ್ತೀರ್ಣ ಅನಿವಾರ್ಯವಾಗಿತ್ತು. ಆದರೆ ಆ ಜಾಗವೆಲ್ಲಾ ಭಾರತೀಯ ಸೇನೆಗೆ ಸೇರಿದ್ದ ಕಾರಣ ಕೇಂದ್ರ ಸರ್ಕಾರದೊಂದಿಗೆ ಏನೇ ವಿನಂತಿ ಮಾಡಿದ್ದರೂ 15 ವರ್ಷಗಳಿಂದ ಸಾಧ್ಯವಾಗಿರಲಿಲ್ಲ. ಆದರೆ ಗೌಡರು ಪ್ರಧಾನಿಯಾಗಿದ್ದಾಗ ಸೇನೆಗೆ ಸೇರಿದ್ದ 85 ಎಕರೆ ಜಾಗವನ್ನು ಬಿಡಿಎಗೆ ವರ್ಗಾವಣೆ ಮಾಡಿದ್ದರಿಂದ ಹಿಂದಿನ ಹಳೇ ವಿಮಾನ ರಸ್ತೆ, ಸಿವಿ ರಾಮನ್, ಹಲಸೂರು ಕೆರೆ ರಸ್ತೆ, ಕೋರಮಂಗಲ ರಸ್ತೆಗಳು ನಿರ್ಮಾಣವಾಗಿ ರಸ್ತೆ ಸಂಚಾರ ಸುಗಮವಾಯಿತು.
ತೆರಿಗೆ ರಜೆ..
ಬೆಂಗಳೂರು ಸೇರಿದಂತೆ ಹಲವು ರಾಜ್ಯಗಳಲ್ಲಿ ನಿರ್ಮಾಣವಾಗುತ್ತಿದ್ದ ಐಟಿ ಪಾರ್ಕ್ಗಳು ಮುಂದೆ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುತ್ತವೆ ಎಂದು ಮನಗೊಂಡು ಐಟಿ ಉದ್ಯಮಕ್ಕೆ 10 ವರ್ಷ ಟ್ಯಾಕ್ಸ್ ರಜೆ (ತೆರಿಗೆ ರಜೆ) ಘೋಷಿಸಿ ದೇಶದಲ್ಲಿ ಐಟಿ ಕ್ರಾಂತಿಗೆ ಮುನ್ನುಡಿ ಬರೆದರು. ಆಗ ನಮ್ಮ ರಾಜ್ಯಕ್ಕೆ ಪ್ರತ್ಯೇಕ ರೈಲ್ವೆ ವಲಯವಿಲ್ಲದೆ ಉದ್ಯೋಗದಲ್ಲಿ ಮತ್ತು ರೈಲುಗಳ ವಿಚಾರದಲ್ಲಿ ಅನ್ಯಾಯವಾಗುತ್ತಿದ್ದುದನ್ನು ಮನಗೊಂಡು ರಾಜ್ಯಕ್ಕೆ ಪ್ರತ್ಯೇಕ ರೈಲ್ವೆ ವಲಯವನ್ನು ತಂದರು.
ವಿಮಾನ ನಿಲ್ಣಾಣ ಸ್ಥಾಪನೆಗೆ ಸಹಕಾರ
ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಾಪನೆಗೆ ಅನುಮತಿ ನೀಡಿ ರೂಪುರೇಷೆಗಳನ್ನು ಸಿದ್ಧಪಡಿಸಲು ಸಹಕರಿಸಿದರು. ಸೀಬರ್ಡ್ ನೌಕಾ ನೆಲೆಗೆ ಹೆಚ್ಚಿನ ಅನುದಾನ ನೀಡಿದರು. ಘಟಪ್ರಭ ಮತ್ತು ಕಾರಂಜಿ ನೀರಾವರಿ ಯೋಜನೆಗಳಿಗೆ ಹಣ ಒದಗಿಸಿ ಅನುಷ್ಠಾನಗೊಳಿಸಿದರು. ತುಮಕೂರು, ಬಳ್ಳಾರಿ, ಬೆಳಗಾವಿ, ಬಿಜಾಪುರ (ಈಗಿನ ವಿಜಯಪುರ), ಹಾಸನ, ಧಾರವಾಡ, ಶಿವಮೊಗ್ಗ, ಮೈಸೂರು ಮುಂತಾದೆಡೆ 20 ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಅನುಮತಿ ನೀಡಿದರು.
ಶಾಂತಿ ನೆಲೆಸಲು ಕಾರಣ...
1988ರ ನಂತರ ಜಮ್ಮು-ಕಾಶ್ಮೀರದಲ್ಲಿ ಚುನಾವಣೆಗಳು ನಡೆಯದೆ ಎಲ್ಲೆಲ್ಲೂ ಅಶಾಂತಿ ತಲೆದೋರಿದ ಸಮಯದಲ್ಲಿ ಗೌಡರು ಕಾಶ್ಮೀರಕ್ಕೆ ತೆರಳಿ ಅಲ್ಲಿನ ಜನರಿಗೆ ವಿಶ್ವಾಸ ಮೂಡಿಸಿ, ಚುನಾವಣೆ ನಡೆಸಿ, ಕಣಿವೆ ರಾಜ್ಯದಲ್ಲಿ ಶಾಂತಿ ನೆಲಸುವ ಹಾಗೆ ಮಾಡಿದರು.
ಬಹಳಷ್ಟು ವರ್ಷಗಳಿಂದ ಬಾಂಗ್ಲ ದೇಶದೊಂದಿಗಿದ್ದ ಫರಕ್ಕೆ ಬ್ಯಾರೇಜಿನ ನೀರಿನ ಸಮಸ್ಯೆಯನ್ನು ಕೆಲವೇ ದಿನಗಳಲ್ಲಿ ಬಾಂಗ್ಲಾ ಪ್ರಧಾನಿಯೊಂದಿಗೆ ಸೌಹಾರ್ದಯುತವಾಗಿ ಬಗೆಹರಿಸಿ, ಭಾರತಕ್ಕೆ ಲಾಭವಾಗುವಂತೆ ನೋಡಿಕೊಂಡರು. ಗುಜರಾತ್ ಮತ್ತು ಮಧ್ಯಪ್ರದೇಶಗಳ ನಡುವೆ ಇದ್ದ ನೀರಿನ ಸಮಸ್ಯೆಯನ್ನು ಚಾಣಾಕ್ಷತನದಿಂದ ಬಗೆಹರಿಸಿದರು.
ರೈತರಿಂದ ಭತ್ತ ಖರೀದಿ...
ರಾಷ್ಟ್ರೀಯ ಕೃಷಿ ನೀತಿಯನ್ನು ಜಾರಿಗೆ ತಂದರು. ದೆಹಲಿ ಮೆಟ್ರೋಗೆ ಅನುಮತಿ ನೀಡಿದ್ದಲ್ಲದೆ ಕೇಂದ್ರ ಸರ್ಕಾರದಿಂದ ಶೇ. 50ರಷ್ಟು ಅನುದಾನ ನೀಡಿ ಕೆಲಸಕ್ಕೆ ಚಾಲನೆ ನೀಡಿದರು. ಪ್ರಥಮವಾಗಿ ಲೋಕಪಾಲ ಮಸೂದೆ ಮಂಡಿಸಿದರು. ಮಹಿಳೆಯರ ಸಬಲೀಕರಣಕ್ಕಾಗಿ ಮಹಿಳಾ ಶೇ. 33ರಷ್ಟು ಮೀಸಲಾತಿ ವಿಧೇಯಕ ಮಂಡಿಸಿದರು. ದೇಶದ ಅಭಿವೃದ್ಧಿಗೆ ಹೆದ್ದಾರಿ ನಿರ್ಮಾಣದ ಮಹತ್ವವನ್ನು ಮನಗೊಂಡು ಹೆದ್ದಾರಿ ನಿರ್ಮಾಣದ ರಹದಾರಿ ಬಗ್ಗೆ ಕ್ಯಾಬಿನೆಟ್ನಲ್ಲಿ ನಿರ್ಧಾರ ಕೈಗೊಳ್ಳುವ ಮೂಲಕ ಚಾಲನೆ ನೀಡಿದರು.
ರೈತರ ಅನುಕೂಲಕ್ಕಾಗಿ ಟ್ರ್ಯಾಕ್ಟರ್ ಮತ್ತು ಕೃಷಿ ಉತ್ಪನ್ನಗಳಿಗೆ ಸಬ್ಸಿಡಿ ಕೊಟ್ಟು, ತೆರಿಗೆ ರಹಿತ ಮಾಡಿ ರೈತರ ಕಲ್ಯಾಣಕ್ಕೆ ಮುನ್ನುಡಿ ಬರದರು. ಪ್ರಥಮ ಬಾರಿಗೆ ಕಪ್ಪು ಹಣದ ಮೇಲೆ ಕಣ್ಣಿಟ್ಟು, ಕಾಳಧನಿಕರಿಗೆ ಸಿಂಹಸ್ವಪ್ನರಾಗಿ 23 ವರ್ಷಗಳ ಹಿಂದೆಯೇ ₹ 10,000 ಕೋಟಿ ಕಪ್ಪು ಹಣ ಹೊರ ತಂದರು.
1997ರಲ್ಲಿ ಒಮ್ಮೆ ಪಂಜಾಬ್ನ ರೈತರು ಯಥೇಚ್ಛವಾಗಿ ಭತ್ತ ಬೆಳೆದ ಪರಿಣಾಮ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಂತಾಯಿತು. ರೈತರಿಂದ ಭತ್ತ ಖರೀದಿಸಲು ಯಾರೂ ಮುಂದೆ ಬರಲಿಲ್ಲ. ಜೊತೆಗೆ ರೈತರಿಗೆ ಆಸರೆಯಾಗಬೇಕಿದ್ದ ಅಲ್ಲಿನ ಸ್ಥಳೀಯ ಪಂಜಾಬ್ ಸರ್ಕಾರವೂ ರೈತರಿಗೆ ಸಹಾಯ ಮಾಡಲಿಲ್ಲ.
ಅದರ ವಿಚಾರ ತಿಳಿದ ಪ್ರಧಾನಿ ದೇವೇಗೌಡರು, ರೈತರು ಬೆಳೆದ ಅದೆಷ್ಟೇ ಭತ್ತವಿದ್ದರೂ ಆ ಎಲ್ಲಾ ಭತ್ತವನ್ನು ರೈತರಿಂದ ಸರ್ಕಾರವೇ ಖರೀದಿಸಲು ಆದೇಶ ನೀಡುವ ಮೂಲಕ ಮಣ್ಣಿನ ಮಗ ಎಂಬುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ದೇವೇಗೌಡರ ಈ ಸಹಾಯವನ್ನು ಪಂಜಾಬಿನ ರೈತರು ಮರೆಯಲಿಲ್ಲ. ತಾವು ಬೆಳೆಯುವ ಭತ್ತದ ತಳಿಯೊಂದಕ್ಕೆ ದೇವೇಗೌಡರ ಹೆಸರು ನಾಮಕರಣ ಮಾಡುವ ಮೂಲಕ ದೇವೇಗೌಡರನ್ನು ಸದಾ ನೆನಪಿಸಿಕೊಳ್ಳುತ್ತಾರೆ.