ಬೆಂಗಳೂರು: ಲಿಂಗಾಯತ ಅಭಿವೃದ್ಧಿ ಮಂಡಳಿಯ ಸ್ಥಾಪನೆ ವಿಚಾರ ಸಾಕಷ್ಟು ಚರ್ಚೆಯಲ್ಲಿದೆ. ಆದರೆ ಅಭಿವೃದ್ಧಿ ಮಂಡಳಿ ಸ್ಥಾಪಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಅವರು, ಲಿಂಗಾಯತ ಸಮುದಾಯಕ್ಕೆ ಶೇ 16 ರಿಂದ 18 ರಷ್ಟು ಮೀಸಲಾತಿ ನೀಡಬೇಕು. ಮಹಾರಾಷ್ಟ್ರದಲ್ಲಿ ಮೀಸಲಾತಿ ನೀಡುವಂತೆ ಇಲ್ಲಿಯೂ ಕೊಟ್ರೆ ಮಾತ್ರ ಅನುಕೂಲವಾಗಲಿದೆ. ಇಲ್ಲ ಅಂದ್ರೆ ಸುಮ್ಮನೆ 200, 300 ಕೋಟಿ ನಿಗಮಗಳನ್ನ ಮಾಡಿಕೊಂಡ್ರೆ ಪ್ರಯೋಜನವಿಲ್ಲ. ಬಸವರಾಜ್ ಹೊರಟ್ಟಿ ಅವರ ಪತ್ರಕ್ಕೆ ನನ್ನ ಸಹಮತಿ ಇದೆ ಎಂದಿದ್ದಾರೆ.
ಸಣ್ಣ ಸಣ್ಣ ಸಮಾಜಗಳಿಗೆ ಅಭಿವೃದ್ಧಿ ಪ್ರಾಧಿಕಾರ ಅನುಕೂಲ ಆಗುತ್ತೆ. ಆದರೆ ಕರ್ನಾಟಕದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿರುವುದು ಲಿಂಗಾಯಿತ ಸಮಾಜ. ಶೇ 16 ರಿಂದ 18 ರಷ್ಟು ಲಿಂಗಾಯತರಿದ್ದಾರೆ. ಲಿಂಗಾಯತರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಶೇ 16 ರಷ್ಟು ಮೀಸಲಾತಿ ನೀಡಿದರೆ ಮಾತ್ರ ಅನುಕೂಲ ಆಗುತ್ತೆ. ಲಿಂಗಾಯತ ಸಮುದಾಯದ ಸಂಘ ಸಂಸ್ಥೆಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಸುರೇಶ್ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡಿದರೆ ಅವರ ಪರವಾಗಿ ಪ್ರಚಾರ ಮಾಡುವುದಾಗಿ ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಭಾವನಾತ್ಮಕವಾಗಿ ಮಾತಾಡಿರಬಹುದು. ಈ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತೆ. ನನಗೆ ಅಭ್ಯರ್ಥಿ ಆಯ್ಕೆ ಹಿನ್ನಲೆಯಲ್ಲಿ ಸಮಿತಿ ಮಾಡಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಸತೀಶ್ ಜಾರಕಿಹೊಳಿ ಜೊತೆ ಮಾತಾಡಿದ್ದೇನೆ. ಇದೇ ಶನಿವಾರ ಸಭೆ ನಡೆಸುತ್ತೇವೆ ಎಂದಿದ್ದಾರೆ.
ಹಣ ಕೆಲಸ ಮಾಡಿದೆ...
ಆರ್ ಆರ್ ನಗರ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ವಿದ್ಯಾವಂತೆ, ಸುಸಂಸ್ಕೃತೆ ಆಗಿ ಇದ್ರೂ, ಜಾತಿ ಲೆಕ್ಕಾಚಾರ ನೆರವಾಗಬಹುದು ಎಂಬ ನಿರೀಕ್ಷೆ ಇತ್ತು. ಅದು ಕೈಗೂಡಲಿಲ್ಲ. ಶಿರಾದಲ್ಲಿ ಟಿ ಬಿ ಜಯಚಂದ್ರ ಸಾಕಷ್ಟು ಕೆಲಸ ಮಾಡಿದ್ರು. ನೀರಾವರಿ ವಿಚಾರವಾಗಿ ಸಾಕಷ್ಟು ಕೆಲಸ ಮಾಡಿದ್ದರೂ. ಕೃಷ್ಣಾ, ಕಾವೇರಿ ನದಿಗಳಿಂದ ನೀರು ಅಲ್ಲಿಗೆ ಹರಿಸಿದ್ರು. ಆದರೆ ಜನರು ಕೈ ಹಿಡಿಯಲಿಲ್ಲ. ಇದು ಜಯಚಂದ್ರ ಅವರ ಸೋಲಲ್ಲ ಪ್ರಜಾಪ್ರಭುತ್ವದ ಸೋಲು. ವಿಜಯೇಂದ್ರ ಅವರು ಅಲ್ಲಿ ಹೋಗಿ ಹಣ ಹಂಚಿ ಚುನಾವಣೆ ಗೆದ್ದಿದ್ದಾರೆ. ಹೀಗೆ ಆದ್ರೆ ಕೆಲಸ ಮಾಡುವುದಕ್ಕಿಂತ ಹಣ ಮಾಡಿ, ಹಣ ಹಂಚಿ ಚುನಾವಣೆ ಗೆಲ್ಲುವುದೆ ವಾಸಿ ಎಂದು ಜನರು ಯೋಚನೆ ಮಾಡುವ ಹಾಗೆ ಆಗುತ್ತೆ ಎಂದರು.