ಬೆಂಗಳೂರು : ಶಾಸಕ ಜಮೀರ್ ಅಹ್ಮದ್ ಮೇಲಿನ ಡ್ರಗ್ಸ್ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ದುರುದ್ದೇಶ ಇಟ್ಟುಕೊಂಡು ಇಂತಹ ಆರೋಪ ಮಾಡಬಾರದು. ಡ್ರಗ್ಸ್ ಇಡೀ ಸಮಾಜಕ್ಕೆ ಕಂಟಕ. ಡ್ರಗ್ಸ್ ಈಗ ಬಂದಿರುವುದಲ್ಲ, ಬಹಳ ವರ್ಷದಿಂದಲೇ ಇದೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಲಿ ಎಂದರು.
ಸರ್ಕಾರದ ವೈಫಲ್ಯ ಮುಚ್ಚೋಕೆ ಇದನ್ನು ಮಾಡುತ್ತಿದ್ದಾರೆ. ಜಮೀರ್ ಕೊಲೊಂಬೊಗೆ ಹೋಗೋದು ಅಪರಾಧವಲ್ಲ. ಡ್ರಗ್ಸ್ ಜಾಲದಲ್ಲಿ ಇದ್ದರಾ, ಅದು ಗೊತ್ತಿದ್ಯಾ? ಕ್ಯಾಸಿನೊಗೆ ಹೋಗಿದ್ರೋ ಇಲ್ವೋ ನನಗೆ ಗೊತ್ತಿಲ್ಲ. ನಾನು ವಿದೇಶಕ್ಕೆ ಹೋದಾಗ ಅದರ ಬಾಗಿಲು ನೋಡಿದ್ದೆ. ಜಮೀರ್ ಈ ಜಾಲದಲ್ಲಿ ಇದ್ದಾರೆ ಅಂತಾ ಪ್ರಶಾಂತ ಸಂಬರಗಿ ಹೇಳಿದ್ದಾರಾ? ಫಾಸಿಲ್ ಇದ್ದಾರೆ ಅಂತಾ ಹೇಳಿದ್ದಾರೆ. ಫಾಸಿಲ್ ಮೇಲೆ ಬೇಕಾದ್ರೆ ಕ್ರಮ ಕೈಗೊಳ್ಳಲಿ ಎಂದರು.
ಫೋಟೋದಲ್ಲಿ ನನ್ನ ಜೊತೆ ಕಳ್ಳ ಇರ್ತಾನೆ. ಹಾಗಂತ ನನ್ನನ್ನೂ ಕಳ್ಳ ಅನ್ನೋಕೆ ಆಗುತ್ತಾ? ಸಂಬರಗಿ ಬಿಜೆಪಿ ನಾಯಕರ ಜೊತೆ ಇಲ್ವಾ?. ಹಾಗಂತಾ, ನಾವು ಏನಾದ್ರೂ ಆರೋಪ ಮಾಡೋಕೆ ಆಗುತ್ತದೆಯೇ? ಜಮೀರ್ ನನ್ನನ್ನೂ ಭೇಟಿ ಮಾಡಿದ್ದರು. ಆಗ ಏನಪ್ಪಾ ನಿನ್ನ ಮೇಲೆ ಆರೋಪ ಅಂತಾ ಕೇಳಿದ್ದೆ. ನನ್ನದೇನು ತಪ್ಪಿಲ್ಲ, ನೀವು ಸಂಬರಗಿ ಅವರನ್ನೇ ಕೇಳಿ ಎಂದು ಹೇಳಿದರು. ಡ್ರಗ್ಸ್ ಜಾಲದಲ್ಲಿ ಯಾರಿದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲಿ. ಅದು ಬಿಟ್ಟು ರಾಜಕೀಯ ಉದ್ದೇಶದಿಂದ ತಪ್ಪು ಹೊರಿಸೋದು ಸರಿಯಲ್ಲ ಎಂದರು.