ಬೆಂಗಳೂರು: ಕೇಂದ್ರ ಸರ್ಕಾರ ಸಹಕಾರ ಕೊಟ್ಟರೆ ಮಾತ್ರ ರಾಜ್ಯ ಸರ್ಕಾರ ಸಾಧನೆ ಮಾಡಲು ಸಾಧ್ಯ. ಇಲ್ಲದಿದ್ದರೆ ರಾಜ್ಯ ಸರ್ಕಾರಕ್ಕೆ ಕಷ್ಟವಾಗುತ್ತದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ, ರಾಜ್ಯ ಸರ್ಕಾರದ 100 ದಿನದ ಸಾಧನೆ ಬಗ್ಗೆ ಹೇಳಿದ್ದಾರೆ.
ಡಾಲರ್ಸ್ ಕಾಲೋನಿಯ ಸಿಎಂ ನಿವಾಸ ಧವಳಗಿರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನ ಭೇಟಿಯಾಗಿ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಅವರು, ಬಿಟಿಎಂ ಲೇಔಟ್ ಮತ್ತು ಜಯನಗರ ಕ್ಷೇತ್ರಗಳ ಅನುದಾನ ಸಂಬಂಧ ಚರ್ಚೆ ಮಾಡಿದ್ದೇನೆ. ನನ್ನ ಮತ್ತು ನನ್ನ ಮಗಳ ಕ್ಷೇತ್ರದ ಜೊತೆಗೆ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಕಡಿತ ಆಗಿದೆ. ಅನುದಾನ ಕಡಿತ ಮಾಡಬೇಡಿ ಮುಂದುವರೆಸಿ,ಅಂತ ಬಿಎಸ್ವೈಗೆ ಕೇಳಿದ್ದೇನೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ನಮ್ಮ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಲಾಗಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ಅನುದಾನಗಳಲ್ಲಿ ಕಡಿತ ಮಾಡಲಾಗಿದೆ ಈ ಸಂಬಂಧ ನಾವು ಪ್ರತಿಭಟನೆ ಸಹ ಮಾಡಿದ್ದೆವು. ಈಗ ಮತ್ತೊಮ್ಮೆ ಸಿಎಂ ಭೇಟಿ ಮಾಡಿ ಮನವಿ ಮಾಡಿದ್ದೇನೆ ಎಂದರು.
ನೆರೆ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯ ಸಹಕಾರ ಕೊಟ್ಟಿಲ್ಲ. ಕೇಂದ್ರ ಸಹಕಾರ ಕೊಟ್ಟಿದ್ದರೆ ರೈತರ ಸಮಸ್ಯೆ ನಿಗುತ್ತಿತ್ತು. ಕೇಂದ್ರ ರಾಜ್ಯಕ್ಕೆ ಹೆಚ್ಚಿನ ಅನುದಾನ ಕೊಡಬೇಕಿತ್ತು. ಆದರೆ, ಕೇಂದ್ರ ಸರ್ಕಾರದಿಂದ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಕೇಂದ್ರ ಹಣ ಕೊಡದ ಕಾರಣ ರಾಜ್ಯದ ಮೇಲೆ ಅಧಿಕ ಹೊರೆಯಾಗಿದೆ. ರಾಜ್ಯ ಸರ್ಕಾರಕ್ಕೂ ಈ ವಿಚಾರದಲ್ಲಿ ಕೆಟ್ಟ ಹೆಸರು ಬರುವಂತಾಯಿತು. ಕೇಂದ್ರ ಸರ್ಕಾರ ಸಹಕಾರ ಕೊಟ್ಟರೆ ಮಾತ್ರ ರಾಜ್ಯ ಸರ್ಕಾರ ಸಾಧನೆ ಮಾಡಲು ಸಾಧ್ಯ.ಇಲ್ಲದಿದ್ರೆ, ರಾಜ್ಯ ಸರ್ಕಾರಕ್ಕೆ ಕಷ್ಟ ಆಗುತ್ತದೆ ಎಂದರು.
ಇನ್ನು, ಸಿಎಂ ಯಡಿಯೂರಪ್ಪ ಮತ್ತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭೇಟಿ ವಿಚಾರ ಗೊತ್ತಿಲ್ಲ. ಆದರೆ ಅವರಿಬ್ಬರೂ ಖಾಸಗಿ ಕಾರ್ಯಕ್ರಮದಲ್ಲಿ ಭೇಟಿ ಮಾಡಿದ್ದರೆ ತಪ್ಪೇನಿದೆ. ನಾನು ಕೂಡ ಈಗ ಸಿಎಂ ಭೇಟಿ ಮಾಡಿದ್ದೇನೆ. ಇದಕ್ಕೂ ರಾಜಕೀಯ ಬಣ್ಣ ಕಟ್ಟೋಕಾಗುತ್ತಾ? ನಾನು ಸಿಎಂ ಜೊತೆ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ. ಕ್ಷೇತ್ರದ ಅನುದಾನ ಕುರಿತು ಮಾತ್ರ ಚರ್ಚೆ ನಡೆಸಿದ್ದೇನೆ. ಹಾಲಿ ಸಿಎಂ ಹಾಗೂ ಮಾಜಿ ಸಿಎಂ ಭೇಟಿಗೆ ಮಹತ್ವ ನೀಡಬೇಕಿಲ್ಲ ಎಂದರು.
ರಾಜ್ಯ ಸರ್ಕಾರದ ನೂರು ದಿನದ ಸಾಧನೆ ಶೂನ್ಯ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ರಾಮಲಿಂಗಾರೆಡ್ಡಿ, ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು ವಿಪಕ್ಷ ನಾಯಕರಿಗೆ ಅಂಕಿ ಅಂಶ ಚೆನ್ನಾಗಿ ಗೊತ್ತಿರುತ್ತದೆ ಎಂದರು.